Sunday, October 12, 2025

ಕಾವೇರಿ ತೀರ್ಥೋದ್ಭವ: ಅಗತ್ಯ ಸಿದ್ಧತೆಗೆ 2.75 ಕೋಟಿ ರೂ. ಬಿಡುಗಡೆ

ಹೊಸದಿಗಂತ ವರದಿ ಮಡಿಕೇರಿ:

ಕಾವೇರಿ ಉಗಮ ಸ್ಥಾನವಾದ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಅ.17ರಂದು ನಡೆಯಲಿರುವ ಪವಿತ್ರ ತೀರ್ಥೋದ್ಭವದ ಸಿದ್ಧತೆಗಾಗಿ ರಾಜ್ಯ ಸರಕಾರ 2.75 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಅ.17ರ ಮಧ್ಯಾಹ್ನ 1:44 ನಿಮಿಷಕ್ಕೆ ಸಲ್ಲುವ ಮಕರ ಲಗ್ನದಲ್ಲಿ ಕಾವೇರಿಯು ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಲಿದ್ದು, ಆ ಮೂಲಕ ಭಾಗಮಂಡಲದ ಶ್ರೀ ಭಗಂಡೇಶ್ವರ – ತಲಕಾವೇರಿ ದೇವಾಲಯಗಳಲ್ಲಿ ರೂಢಿ ಸಂಪ್ರದಾಯದಂತೆ, ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜಾತ್ರೆ ನಡೆಯಲಿದೆ.

ಈ ವರ್ಷ ಮಧ್ಯಾಹ್ನದ ಸಮಯದಲ್ಲಿ ತೀರ್ಥೋದ್ಭವ ಜರುಗಲಿರುವುದರಿಂದ ಕಾವೇರಿ ಮಾತೆಯ ದರ್ಶನಕ್ಕಾಗಿ ಅಧಿಕ ಸಂಖ್ಯೆ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಈ ದಿಸೆಯಲ್ಲಿ ಜಿಲ್ಲಾಡಳಿತದಿಂದ ಪೂರ್ವ ಸಿದ್ಧತೆಗಳನ್ನು ಕೈಗೂಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.

ಜಾತ್ರಾ ಮಹೋತ್ಸದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಹಾಗೂ ಇತರೆ ನಿರ್ವಹಣೆಗಾಗಿ ಕಾವೇರಿ ನೀರಾವರಿ ನಿಗಮದ ವತಿಯಿಂದ ರೂ.2 ಕೋಟಿ ಹಾಗೂ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರದ ವತಿಯಿಂದ ಮುಜರಾಯಿ ಇಲಾಖೆಯ ಮೂಲಕ 75 ಲಕ್ಷಗಳ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯಗಳಿಗೆ ವಿದ್ಯುತ್ ದೀಪಾಲಂಕಾರ, ಬ್ಯಾರಿಕೇಡ್ ಅಳವಡಿಕೆ, ವೇದಿಕೆ ನಿರ್ಮಾಣ, ಮಳೆಯಿಂದ ರಕ್ಷಣೆಗಾಗಿ ಮೆಟಲ್ ಶೀಟ್, ಪೆಂಡಾಲ್’ಗಳು, ಹೂವಿನ ಅಲಂಕಾರ, ತೀರ್ಥೋದ್ಭವದ ವೀಕ್ಷಣೆಯ ವೇಳೆ ನೂಕು ನುಗ್ಗಲು ಉಂಟಾಗದಂತೆ ಎಲ್.ಇ.ಡಿ ಪರದಗಳು, ಫೋಟೋಗ್ರಫಿ ಮತ್ತು ಭಕ್ತಾದಿಗಳ ಭದ್ರತೆಯ ದೃಷ್ಟಿಯಿಂದ ಅವಶ್ಯವಿರುವ ಕಡೆಗಳಲ್ಲಿ ಸಿ.ಸಿ ಕ್ಯಾಮರಾ ಅಳವಡಿಕೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಇ-ಟೆಂಡರ್ ಮೂಲಕ ಗುತ್ತಿಗೆದಾರರನ್ನು ಗುರುತಿಸಿಕೊಂಡು ಕಾರ್ಯಾದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಅತೀ ಹೆಚ್ಚು ಮಳೆಯಿಂದಾಗಿ ದೇವಾಲಯಗಳ ಗೋಪುರ, ನೆಲಹಾಸು ಅಲಂಕಾರಿಕ ಕಲ್ಲುಗಳ ಶುಚಿತ್ವ, ಸುಣ್ಣ – ಬಣ್ಣಗಳು ಮತ್ತು ಕಾವೇರಿ ನೀರಾವರಿ ನಿಗಮದ ವತಿಯಿಂದ ತ್ರಿವೇಣಿ ಸಂಗ್ರಮ ಸ್ನಾನಘಟ್ಟದಲ್ಲಿ ಹೂಳೆತ್ತುವುದು ಹಾಗೂ ದೇವಾಲಯದ ಆವರಣಗಳು ಮತ್ತು ಭಾಗಮಂಡಲಕ್ಕೆ ಸಂಪರ್ಕಿಸುವ ರಸ್ತೆಗಳ ಇಕ್ಕೆಲಗಳಲ್ಲಿ ಕಾಡು ಕಡಿದು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಕೆಲಸ ಪ್ರಗತಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ‌ ಪೂರ್ವಭಾವಿ ಸಭೆಯಲ್ಲಿ ನೀಡಲಾದ ಸೂಚನೆಯಂತೆ ಜಾತ್ರಾ ಸಂದರ್ಭದಲ್ಲಿ ಎಲ್ಲಾ ಅಗತ್ಯ ಸೌಕರ್ಯಗಳನ್ನು ಒದಗಿಸಲು ನಿರ್ದೇಶನ ನೀಡಲಾಗಿದೆ ಎಂದು ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.

error: Content is protected !!