ಇಂದಿನ ವೇಗದ ಜೀವನದಲ್ಲಿ ಅಡುಗೆ ಮಾಡಲು ಸಮಯವಿಲ್ಲ ಎಂಬ ಅಹವಾಲು ಎಲ್ಲೆಡೆ ಕೇಳಿಸುತ್ತಿದೆ. ಬಹುತೇಕ ಮಂದಿ ಕೆಲಸದ ಒತ್ತಡದಿಂದ ಒಂದು ಹೊತ್ತಿನ ಊಟವನ್ನು ಬಿಟ್ಟುಬಿಡುವುದೋ, ಇಲ್ಲವೇ ಸ್ವಿಗ್ಗೀ, ಜೊಮ್ಯಾಟೊ ಮಾದರಿಯ ಆ್ಯಪ್‌ಗಳ ಮೂಲಕ ಆಹಾರ ಆರ್ಡರ್ ಮಾಡುವುದೋ ಸಾಮಾನ್ಯವಾಗಿದೆ. ಮನೆಯ ಊಟದ ಬದಲು ಹೊರಗಿನ ಆಹಾರದ ಮೇಲೆ ಅವಲಂಬಿತರಾಗುವುದು ಸಹ ಹೊಸದೇನಲ್ಲ. ಇಂತಹ ಪರಿಸ್ಥಿತಿಯಲ್ಲಿ ಜನರಲ್ಲಿ “ಮೀಲ್ ಪ್ರೆಪ್ಪಿಂಗ್” ಎಂಬ ಹೊಸ ಟ್ರೆಂಡ್ ಈಗ ಹೆಚ್ಚು ಚರ್ಚೆಗೆ ಕಾರಣವಾಗಿದೆ.
ಮೀಲ್ ಪ್ರೆಪ್ಪಿಂಗ್ ಎಂದರೆ ಒಂದೇ ಸಮಯದಲ್ಲಿ ದಿನದ ಎಲ್ಲಾ ಹೊತ್ತಿನ ಊಟವನ್ನು ತಯಾರಿಸಿಟ್ಟುಕೊಳ್ಳುವುದು. ಅಂದರೆ, ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟ—ಎಲ್ಲ ಒಂದೇ ಸಲ ತಯಾರಿಸಿಡುವುದು. ವಿದೇಶಗಳಲ್ಲಿ ಜನಪ್ರಿಯವಾಗಿದ್ದ ಈ ಅಭ್ಯಾಸ ಈಗ ಭಾರತದಲ್ಲಿಯೂ ವೇಗವಾಗಿ ಜನಪ್ರಿಯವಾಗುತ್ತಿದೆ. ಇದು ಸಮಯ ಉಳಿತಾಯ ಮಾಡುವುದಲ್ಲದೆ ಅಡುಗೆಮನೆಯ ಒತ್ತಡವನ್ನು ಸಹ ಕಡಿಮೆ ಮಾಡುತ್ತದೆ.

ಆದರೆ ಆತಿಥ್ಯ ವಲಯದಲ್ಲಿ ಮೀಲ್ ಪ್ರೆಪ್ಪಿಂಗ್ ಸಾಧ್ಯವಿಲ್ಲ. ಹೋಟೆಲ್‌ಗಳು ಅಥವಾ ಕಫೆಗಳಲ್ಲಿ ಗ್ರಾಹಕರಿಗೆ ಯಾವಾಗಲೂ ತಾಜಾ ಆಹಾರ ನೀಡಬೇಕು. ಆದ್ದರಿಂದ ಅಲ್ಲಿ ಆಹಾರವನ್ನು ಮುಂಚಿತವಾಗಿ ತಯಾರಿಸಿ ಇಡುವುದು ಅನುಸರಿಸಲು ಸಾಧ್ಯವಿಲ್ಲ.
ಭಾರತದಲ್ಲಿ ಈಗಾಗಲೇ ಸಮಯದ ಅಭಾವ, ಕೆಲಸದ ಒತ್ತಡ, ಹೊರಗಿನ ಆಹಾರದ ದುಷ್ಪರಿಣಾಮಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಮೀಲ್ ಪ್ರೆಪ್ಪಿಂಗ್ ಒಂದು ಉತ್ತಮ ಆಯ್ಕೆಯಾಗಿ ಪರಿಣಮಿಸುತ್ತಿದೆ. ಇದು ಹಣದ ಉಳಿತಾಯಕ್ಕೂ, ಆರೋಗ್ಯ ಕಾಪಾಡಿಕೊಳ್ಳುವುದಕ್ಕೂ ಸಹಾಯಕವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮೀಲ್ ಪ್ರೆಪ್ಪಿಂಗ್ ಕೇವಲ ವಿದೇಶಿ ಟ್ರೆಂಡ್ ಮಾತ್ರವಲ್ಲ, ಇಂದಿನ ಭಾರತದ ಅವಶ್ಯಕತೆಯೂ ಆಗಿದೆ. ಸರಿಯಾದ ಯೋಜನೆಯೊಂದಿಗೆ ಈ ವಿಧಾನವನ್ನು ಅನುಸರಿಸಿದರೆ ಆರೋಗ್ಯಕರ ಆಹಾರ ಸೇವನೆ ಜೊತೆಗೆ ಸಮಯದ ಸಮರ್ಪಕ ಬಳಕೆಯನ್ನೂ ಖಚಿತಪಡಿಸಿಕೊಳ್ಳಬಹುದು.