Sunday, October 12, 2025

ಕ್ಯಾನ್ಸರ್​ ರೋಗಿಗಳಿಗೆ ಕೇರಳದ ಸರ್ಕಾರಿ ಬಸ್​ಗಳಲ್ಲಿ ಉಚಿತ ಸಂಚಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇರಳ ಸರ್ಕಾರ ಮಹತ್ವದ ಜನಪರ ಘೋಷಣೆಯೊಂದನ್ನು ಮಾಡಿದೆ. ಕ್ಯಾನ್ಸರ್​ ರೋಗಿಗಳು ರಾಜ್ಯದ ಯಾವುದೇ ಸರ್ಕಾರಿ ಬಸ್​​ಗಳಲ್ಲಿ ಉಚಿತವಾಗಿ ಸಂಚಾರ ನಡೆಸಲು ಅವಕಾಶ ಕಲ್ಪಿಸಿದೆ.

ರಾಜ್ಯ ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್ ರೋಗಿಗಳು ಸೂಪರ್ ಫಾಸ್ಟ್ ಮತ್ತು ಎಲ್ಲಾ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅರ್ಹರಾಗಿರುತ್ತಾರೆ ಎಂದರು.

ಕಿಮೊಥೆರಪಿ, ರೇಡಿಯೇಷನ್​ ಮತ್ತು ಇತರ ಚಿಕಿತ್ಸೆಗಳಿಗೆ ಆಗಾಗ್ಗೆ ಪ್ರಯಾಣಿಸಬೇಕಾದ ರೋಗಿಗಳ ಆರ್ಥಿಕ ಹೊರೆ ಕಡಿಮೆ ಮಾಡಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಚಿಕಿತ್ಸೆಗಾಗಿ ರಾಜ್ಯದ ಯಾವುದೇ ಭಾಗಕ್ಕೂ ಪ್ರಯಾಣಿಸುವ ಕ್ಯಾನ್ಸರ್ ರೋಗಿಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಅವಕಾಶ ನೀಡಲಾಗುವುದು.

ಸರ್ಕಾರಿ ಆಸ್ಪತ್ರೆಗಳು ಮಾತ್ರವಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಈ ಸೇವೆಯನ್ನು ವಿಸ್ತರಿಸಲಾಗುವುದು. ಉಚಿತ ಪ್ರಯಾಣ ಸೌಲಭ್ಯವನ್ನು ಪಡೆಯಲು ರೋಗಿಗಳು ಚಿಕಿತ್ಸೆ ನೀಡುತ್ತಿರುವ ವೈದ್ಯರ ಪ್ರಮಾಣಪತ್ರ ತೋರಿಸಿದರೆ ಸಾಕಾಗಿದೆ.

ಬಡ ಮತ್ತು ದುರ್ಬಲ ವರ್ಗಗಳನ್ನು ಬೆಂಬಲಿಸಲು ಮತ್ತು ಚಿಕಿತ್ಸೆಗೆ ಸಂಬಂಧಿಸಿದ ವೆಚ್ಚಗಳು ಹೊರಯಾಗದಂತೆ ತಡೆಯಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಕ್ಯಾನ್ಸರ್ ರೋಗಿಗಳು ಈಗಾಗಲೇ ದೈಹಿಕ ಮತ್ತು ಭಾವನಾತ್ಮಕ ಒತ್ತಡವನ್ನು ಎದುರಿಸುತ್ತಿದ್ದಾರೆ. ಈ ಉಚಿತ ಪ್ರಯಾಣವು ಅವರಲ್ಲಿ ಸಹಾನುಭೂತಿ ಮತ್ತು ಬೆಂಬಲದ ಮಾರ್ಗವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

error: Content is protected !!