ತಂಪಾದ ಪಾನೀಯ ಅಥವಾ ಫ್ರೆಶ್ ಫ್ರೂಟ್ ಜ್ಯೂಸ್ ಎಂದರೆ ಎಲ್ಲರಿಗೂ ಪ್ರಿಯ. ದಾಹ ತಣಿಸಲು, ಶಕ್ತಿ ತುಂಬಿಕೊಳ್ಳಲು ಜನರು ಹೆಚ್ಚಾಗಿ ಜ್ಯೂಸ್‌ಗೆ ಮೊರೆ ಹೋಗುತ್ತಾರೆ. ಆದರೆ ನಿತ್ಯವೂ ಹಣ್ಣಿನ ಜ್ಯೂಸ್ ಕುಡಿಯುವುದು ಆರೋಗ್ಯಕ್ಕೆ ಒಳಿತು ಎಂಬ ಕಲ್ಪನೆ ಸಂಪೂರ್ಣವಾಗಿ ಸತ್ಯವಲ್ಲ ಎಂದು ತಜ್ಞರು ಹೇಳುತ್ತಾರೆ.

ಹಣ್ಣಿನಲ್ಲಿ ನಾರಿನಾಂಶ ಹೆಚ್ಚು ಇರುತ್ತದೆ. ಆದರೆ ಅದನ್ನು ಜ್ಯೂಸ್ ಮಾಡುವಾಗ ಆ ನಾರಿನಾಂಶ ಸಂಪೂರ್ಣವಾಗಿ ಕಳೆದುಹೋಗುತ್ತದೆ. ನಾರಿನಾಂಶ ಇಲ್ಲದ ಹಣ್ಣಿನ ರಸ ದೇಹದಲ್ಲಿ ಸಕ್ಕರೆಯ ಮಟ್ಟವನ್ನು ವೇಗವಾಗಿ ಏರಿಸುತ್ತದೆ. ಹೀಗಾಗಿ ಹಣ್ಣನ್ನು ನೇರವಾಗಿ ತಿನ್ನುವುದು ಆರೋಗ್ಯಕರ ಆಯ್ಕೆ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಜ್ಯೂಸ್ ತಯಾರಿಸಲು ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚು ಹಣ್ಣುಗಳನ್ನು ಬಳಸಲಾಗುತ್ತದೆ. ಇದರಿಂದ ಕ್ಯಾಲೊರಿ ಪ್ರಮಾಣ ಸಹಜವಾಗಿ ಹೆಚ್ಚುತ್ತದೆ. ದಿನವೂ ಹೆಚ್ಚಿನ ಪ್ರಮಾಣದಲ್ಲಿ ಜ್ಯೂಸ್ ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ಜೊತೆಗೆ ರಕ್ತದಲ್ಲಿ ಸಕ್ಕರೆಯ ಮಟ್ಟ ಏರಿಕೆಯಾಗುವ ಅಪಾಯವೂ ಇದೆ. ಮಧುಮೇಹಿಗಳಲ್ಲಿ ಇದು ವಿಶೇಷವಾಗಿ ಗಂಭೀರ ಪರಿಣಾಮ ಉಂಟುಮಾಡಬಹುದು.

ಹೆಚ್ಚಿನವರು ಹಣ್ಣಿನ ರಸಕ್ಕೆ ಸಕ್ಕರೆ ಸೇರಿಸಿ ಕುಡಿಯುತ್ತಾರೆ. ಸಕ್ಕರೆ ಸೇರಿದ ರಸ ದೇಹಕ್ಕೆ ತಾತ್ಕಾಲಿಕ ಶಕ್ತಿ ನೀಡಬಹುದು, ಆದರೆ ಅದೇ ದೀರ್ಘಾವಧಿಯಲ್ಲಿ ಹಲ್ಲು ಹುಳುಕಾಗುವಿಕೆ, ದಂತಕ್ಷಯ ಮತ್ತು ದಂತಕವಚ ಸವೆತಕ್ಕೆ ಕಾರಣವಾಗಬಹುದು. ತಜ್ಞರ ಪ್ರಕಾರ, ಈ ರೀತಿಯ ಪಾನೀಯಗಳು ನಿತ್ಯ ಸೇವನೆಗೆ ಯೋಗ್ಯವಲ್ಲ.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)