Saturday, October 11, 2025

ಏಷ್ಯಾಕಪ್ ಹೀರೋ ತಿಲಕ್ ವರ್ಮಾಗೆ ಹೊಸ ಜವಾಬ್ದಾರಿ! ಏನ್ ಗೊತ್ತಾ ಅದು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾಕಪ್ 2025ರಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾದ ಪರ ಸ್ಫೋಟಕ ಪ್ರದರ್ಶನ ನೀಡಿ ಅಭಿಮಾನಿಗಳ ಮನ ಗೆದ್ದ ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ, ಇದೀಗ ಮತ್ತೊಂದು ಹೊಸ ಹಾದಿಯಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಹೈದರಾಬಾದ್ ಕ್ರಿಕೆಟ್ ಮಂಡಳಿಯು ರಣಜಿ ಟ್ರೋಫಿ 2025ಕ್ಕೆ ತಂಡವನ್ನು ಘೋಷಿಸಿದ್ದು, ತಿಲಕ್ ವರ್ಮಾಗೆ ನಾಯಕತ್ವದ ಜವಾಬ್ದಾರಿ ನೀಡಿದೆ.

ತಿಲಕ್ ವರ್ಮಾ ನೇತೃತ್ವದ ಹೈದರಾಬಾದ್ ತಂಡದಲ್ಲಿ ಒಟ್ಟು 15 ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ರಾಹುಲ್ ಸಿಂಗ್ ಉಪನಾಯಕನಾಗಿ ನೇಮಕಗೊಂಡಿದ್ದಾರೆ. ಈ ತಂಡವು ಮೊದಲ ಮೂರು ಪಂದ್ಯಗಳಲ್ಲಿ ದೆಹಲಿ, ಪುದುಚೇರಿ ಹಾಗೂ ಹಿಮಾಚಲ ಪ್ರದೇಶ ತಂಡಗಳನ್ನು ಎದುರಿಸಲಿದೆ. ತಿಲಕ್ ನೇತೃತ್ವದಲ್ಲಿ ಹೈದರಾಬಾದ್ ತಂಡದ ಪ್ರದರ್ಶನ ಹೇಗಿರುತ್ತದೆ ಎಂಬುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ತಿಲಕ್ ವರ್ಮಾ ಇದುವರೆಗೆ 22 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 7 ಶತಕಗಳು ಹಾಗೂ 5 ಅರ್ಧಶತಕಗಳೊಂದಿಗೆ ಒಟ್ಟು 1,562 ರನ್ ಗಳಿಸಿದ್ದಾರೆ. 52 ಕ್ಕಿಂತ ಹೆಚ್ಚು ಬ್ಯಾಟಿಂಗ್ ಸರಾಸರಿಯುಳ್ಳ ತಿಲಕ್, ಹೈದರಾಬಾದ್ ತಂಡದ ಮುಖ್ಯ ಬ್ಯಾಟಿಂಗ್ ಭರವಸೆಯಾಗಿ ಪರಿಗಣಿಸಲ್ಪಟ್ಟಿದ್ದಾರೆ. ಜೊತೆಗೆ, ತಿಲಕ್ 8 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

ಹೈದರಾಬಾದ್ ತಂಡದಲ್ಲಿ ತಿಲಕ್ ವರ್ಮಾ (ನಾಯಕ), ರಾಹುಲ್ ಸಿಂಗ್ (ಉಪನಾಯಕ), ಸಿವಿ ಮಿಲಿಂದ್, ತನ್ಮಯ್ ಅಗರ್ವಾಲ್, ಎಂ. ಅಭಿರತ್ ರೆಡ್ಡಿ, ಹಿಮ್ತೇಜ್, ವರುಣ್ ಗೌಡ್, ತನಯ್ ತ್ಯಾಗರಾಜನ್, ರೋಹಿತ್ ರಾಯುಡು, ಸರನು ನಿಶಾಂತ್, ಪುನ್ನಯ್ಯ, ಅನಿಕೇತ್ ರೆಡ್ಡಿ, ಕಾರ್ತಿಕೇಯ ಕಾಕಂದ್ ಹಾಗೂ ಎ. ರಾದೇಶ್ (ವಿಕೆಟ್ ಕೀಪರ್) ಇದ್ದಾರೆ. ಮೀಸಲು ಆಟಗಾರರಾಗಿ ಪಿ.ನಿತೀಶ್ ರೆಡ್ಡಿ, ಸಾಯಿ ಪ್ರಜ್ಞಾ ರೆಡ್ಡಿ, ರಕ್ಷಣಾ ರೆಡ್ಡಿ, ನಿತೇಶ್ ಕನಾಲಾ ಮತ್ತು ಮಿಖಿಲ್ ಜೈಸ್ವಾಲ್ ಅವರನ್ನು ಆಯ್ಕೆ ಮಾಡಲಾಗಿದೆ.

error: Content is protected !!