Saturday, October 11, 2025

ಟ್ರಂಪ್ ಮತ್ತೊಮ್ಮೆ ‘ರೆಬೆಲ್’: ಚೀನಾ ಮೇಲೆ ‘100% ಸುಂಕ’ ಬಾಂಬ್’, ವ್ಯಾಪಾರ ಸಮರ ಉತ್ತುಂಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೊಬೆಲ್ ಶಾಂತಿ ಪುರಸ್ಕಾರ ದೊರೆಯದಿದ್ದ ಕಾರಣಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮತ್ತೊಮ್ಮೆ ತಮ್ಮ ‘ರೆಬೆಲ್’ ಸ್ವಭಾವ ಪ್ರದರ್ಶಿಸಿದ್ದಾರೆ. ಭಾರತದ ಬಳಿಕ ಇದೀಗ ಅವರು ನೇರವಾಗಿ ಚೀನಾದ ಮೇಲೆ ಶೇ.100ರಷ್ಟು ಹೆಚ್ಚುವರಿ ಸುಂಕ ವಿಧಿಸುವ ಮೂಲಕ ವ್ಯಾಪಾರ ಸಮರಕ್ಕೆ ಹೊಸ ತಿರುವು ನೀಡಿದ್ದಾರೆ.

ಟ್ರಂಪ್ ಅವರ ಈ ದಿಢೀರ್ ಘೋಷಣೆ ಹೊರಬೀಳುವ ಕೆಲವೇ ಗಂಟೆಗಳ ಮೊದಲು, ಅವರು ಚೀನಾದ ವಿರುದ್ಧ ಬಲವಾದ ಪ್ರತೀಕಾರ ತೀರಿಸಿಕೊಳ್ಳುವ ಎಚ್ಚರಿಕೆ ನೀಡಿದ್ದರು. ಅದರಂತೆ, ನವೆಂಬರ್ 1, 2025 ರಿಂದ ಜಾರಿಗೆ ಬರುವಂತೆ, ಚೀನಾದಿಂದ ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಎಲ್ಲ ಉತ್ಪನ್ನಗಳು ಅಸ್ತಿತ್ವದಲ್ಲಿರುವ ಸುಂಕಗಳ ಜೊತೆಗೆ ಹೆಚ್ಚುವರಿಯಾಗಿ ಶೇ.100ರಷ್ಟು ಸುಂಕಕ್ಕೆ ಒಳಪಡುತ್ತವೆ.

ಇದಕ್ಕೆ ಮುಖ್ಯ ಕಾರಣ, ನವೆಂಬರ್ 1 ರಿಂದ ಜಾರಿಗೆ ಬರಲಿರುವ, ಅಪರೂಪದ ಭೂಮಿಯ ಖನಿಜಗಳ ಮೇಲೆ ರಫ್ತು ಮಿತಿಗಳನ್ನು ವಿಧಿಸುವ ಚೀನಾದ ನಿರ್ಧಾರ. ಚೀನಾದ ಈ ನಿರ್ಧಾರಕ್ಕೆ ಪ್ರತಿಯಾಗಿ, ಟ್ರಂಪ್ ಆಮದು ಸುಂಕವನ್ನು ಹೆಚ್ಚಿಸುವುದಲ್ಲದೆ, ಅಮೆರಿಕದಿಂದ ಪ್ರಮುಖ ಸಾಫ್ಟ್‌ವೇರ್ ರಫ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಘೋಷಣೆಯನ್ನೂ ಮಾಡಿದ್ದಾರೆ. ಈ ಕಠಿಣ ನಿರ್ಧಾರಗಳ ಬಳಿಕ, ವಿಶ್ವದ ಎರಡು ಬೃಹತ್ ಆರ್ಥಿಕತೆಗಳ ನಡುವಿನ ಈ ವ್ಯಾಪಾರ ಯುದ್ಧವು ತೀವ್ರ ಉತ್ತುಂಗಕ್ಕೇರಿದೆ.

ಇದಲ್ಲದೆ, ಡೊನಾಲ್ಡ್ ಟ್ರಂಪ್ ಅವರು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಮಾತುಕತೆ ಅಥವಾ ಸಭೆಗಳನ್ನು ನಡೆಸುವ ಸಾಧ್ಯತೆಯನ್ನೂ ಸದ್ಯಕ್ಕೆ ತಿರಸ್ಕರಿಸಿದ್ದಾರೆ. ಅವರ ಈ ಕ್ರಮವು ಉಭಯ ದೇಶಗಳ ನಡುವಿನ ಸಂಬಂಧ ಇನ್ನಷ್ಟು ಹದಗೆಡುವ ಸ್ಪಷ್ಟ ಸೂಚನೆ ನೀಡಿದೆ.

error: Content is protected !!