ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಷಬ್ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಯಾದ ಕ್ಷಣದಿಂದಲೇ ಪ್ರೇಕ್ಷಕರ ಹೃದಯ ಗೆದ್ದಿದೆ. ಜನರ ಬಾಯಿ ಮಾತು ಹಾಗೂ ಭರ್ಜರಿ ಪ್ರತಿಕ್ರಿಯೆಯ ಹಿನ್ನೆಲೆ, ಸಿನಿಮಾ ದೇಶದಾದ್ಯಂತ ಹೊಸ ದಾಖಲೆಗಳತ್ತ ಮುನ್ನಡೆದಿದೆ. ವಿಶ್ವ ಮಟ್ಟದಲ್ಲಿ ಈಗಾಗಲೇ 500 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಗೌರವ ತಂದಿದೆ.
ಚಿತ್ರದ ಮೊದಲ ದಿನವೇ ಭಾರತದಲ್ಲೇ ಸುಮಾರು 62 ಕೋಟಿ ರೂಪಾಯಿ ಗಳಿಕೆ ದಾಖಲಾಗಿದೆ. ಎರಡನೇ ವಾರದ ಮೊದಲ ದಿನವೂ ಸಿನಿಮಾ ಅದೇ ಉತ್ಸಾಹದಲ್ಲಿ ಮುನ್ನಡೆದು, ಕೇವಲ ಶುಕ್ರವಾರದಲ್ಲೇ 22 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 359 ಕೋಟಿ ರೂಪಾಯಿ ಗಳಿಕೆಯತ್ತ ತಲುಪಿದೆ.
ಅಕ್ಟೋಬರ್ 9ರ ವೇಳೆಗೆ ಸಿನಿಮಾ ಬಿಡುಗಡೆಯಾಗಿ ಎಂಟು ದಿನಗಳು ಕಳೆದಿದ್ದು, ಈ ಅವಧಿಯಲ್ಲಿ ಚಿತ್ರವು ಒಟ್ಟು 337.4 ಕೋಟಿ ರೂಪಾಯಿ ಗಳಿಕೆ ದಾಖಲಿಸಿದೆ. ಇದರಲ್ಲಿ ಕನ್ನಡದಿಂದ 106.95 ಕೋಟಿ, ತೆಲುಗಿನಿಂದ 63.55 ಕೋಟಿ, ತಮಿಳಿನಿಂದ 31.5 ಕೋಟಿ ಮತ್ತು ಮಲಯಾಳಂನಿಂದ 26.65 ಕೋಟಿ ರೂಪಾಯಿ ಆದಾಯ ಬಂದಿದೆ.
ಹಿಂದಿ ಭಾಷಾ ವಲಯದಲ್ಲೂ ಸಿನಿಮಾ ಅಚ್ಚರಿ ಮೂಡಿಸಿದ್ದು, ಅಲ್ಲಿ ಮಾತ್ರವೇ 108.75 ಕೋಟಿ ರೂಪಾಯಿ ಗಳಿಕೆ ದಾಖಲಾಗಿದೆ. ಇದು ಕನ್ನಡಕ್ಕಿಂತಲೂ ಹೆಚ್ಚು ಕಲೆಕ್ಷನ್ ಆಗಿರುವುದು ಗಮನಾರ್ಹ. ಹೀಗಾಗಿ, ಉತ್ತರ ಭಾರತದಲ್ಲಿಯೂ ಚಿತ್ರ ಹೆಚ್ಚಿನ ಪ್ರಭಾವ ಬೀರಿದೆ.