ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಅನುಭವಿ ಆಲ್‌ರೌಂಡರ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಟೀಂ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ರವೀಂದ್ರ ಜಡೇಜಾ ಅವರನ್ನು ಮುಂಬರುವ ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಯಿಂದ ಕೈಬಿಟ್ಟಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ತಂದಿದೆ.
ಕಳೆದ ಕೆಲವು ವರ್ಷಗಳಿಂದ ಸ್ಥಿರ ಪ್ರದರ್ಶನ ನೀಡುತ್ತಾ ಉತ್ತಮ ಫಾರ್ಮ್‌ನಲ್ಲಿ ಇದ್ದರೂ, ಆಯ್ಕೆ ಮಂಡಳಿಯ ಈ ನಿರ್ಧಾರ ಚರ್ಚೆಗೆ ಕಾರಣವಾಗಿದೆ. ಆದಾಗ್ಯೂ, ಜಡೇಜಾ ಈ ಕುರಿತು ಶಾಂತ ಪ್ರತಿಕ್ರಿಯೆ ನೀಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಡೇಜಾ, ಆಯ್ಕೆ ಪ್ರಕ್ರಿಯೆ ನನ್ನ ಕೈಯಲ್ಲಿಲ್ಲ. ಆಯ್ಕೆದಾರರು, ಕೋಚ್ ಹಾಗೂ ನಾಯಕನಿಗೆ ತಮ್ಮದೇ ಆದ ದೃಷ್ಟಿಕೋನವಿದೆ. ಅವರು ನನ್ನೊಂದಿಗೆ ಈ ಬಗ್ಗೆ ಮಾತನಾಡಿದ್ದರು, ಆದ್ದರಿಂದ ನನ್ನ ಹೆಸರು ತಂಡದಲ್ಲಿ ಇಲ್ಲದಿರುವುದು ನನಗೆ ಅಚ್ಚರಿಯಲ್ಲ, ಎಂದು ಹೇಳಿದ್ದಾರೆ.
ನನಗೆ ಅವಕಾಶ ಸಿಕ್ಕಾಗಲೆಲ್ಲಾ, ತಂಡಕ್ಕಾಗಿ ಶೇ.100 ಶ್ರಮಿಸುತ್ತೇನೆ. ಮುಂಬರುವ ವಿಶ್ವಕಪ್‌ನಲ್ಲಿ ಆಡಲು ಮತ್ತು ಭಾರತಕ್ಕೆ ಗೆಲುವು ತರುವುದು ನನ್ನ ಗುರಿ. ಕಳೆದ ಬಾರಿ ನಾವು ಬಹಳ ಹತ್ತಿರ ಬಂದು ವಿಫಲರಾಗಿದ್ದರೂ, ಮುಂದಿನ ಬಾರಿ ಆ ಕನಸನ್ನು ನಿಜಗೊಳಿಸಲು ಪ್ರಯತ್ನಿಸುತ್ತೇವೆ, ಎಂದರು.
ತಂಡವನ್ನು ಪ್ರಕಟಿಸುವ ವೇಳೆ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಜಡೇಜಾ ಕುರಿತು ಸ್ಪಷ್ಟನೆ ನೀಡಿದರು. “ಜಡೇಜಾ ತಂಡದ ದೀರ್ಘಕಾಲದ ಯೋಜನೆಗಳ ಭಾಗವಾಗಿದ್ದಾರೆ. ಅವರು ಅದ್ಭುತ ಆಟಗಾರರು, ಆದರೆ ಆಸ್ಟ್ರೇಲಿಯಾದ ಪಿಚ್‌ಗಳ ಪರಿಸ್ಥಿತಿಯಲ್ಲಿ ಇಬ್ಬರು ಎಡಗೈ ಸ್ಪಿನ್ನರ್‌ಗಳನ್ನು ಆಯ್ಕೆ ಮಾಡುವುದು ಸಾಧ್ಯವಾಗಲಿಲ್ಲ. ಈ ಬಾರಿ ತಂಡದ ಸಮತೋಲನವನ್ನು ಕಾಪಾಡಿಕೊಳ್ಳಲು ವಾಷಿಂಗ್ಟನ್ ಸುಂದರ್ ಮತ್ತು ಕುಲ್ದೀಪ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ,” ಎಂದು ಅಗರ್ಕರ್ ಹೇಳಿದ್ದಾರೆ.