October 16, 2026
Friday, October 16, 2026
spot_img

ಸನ್ ಪಿಕ್ಚರ್ಸ್–ಸಿಎಸ್‌ಕೆ ನಡುವೆ ಕಾನೂನು ಸಮರ: ಏನಿದು ‘ಜೈಲರ್’ ವಿವಾದ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಕ್ರಿಕೆಟ್ ಮತ್ತು ಸಿನಿಮಾ ಕ್ಷೇತ್ರಗಳ ನಡುವೆ ಹೊಸ ವಿವಾದ ಹುಟ್ಟಿಕೊಂಡಿದೆ. ಸನ್ ಪಿಕ್ಚರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಈ ಕಾನೂನು ಸಮರ ಇದೀಗ ಗಮನ ಸೆಳೆದಿದೆ.

ಮಾರ್ಚ್ 1, 2026ರಂದು ಸಿಎಸ್‌ಕೆ ತನ್ನ ಹೊಸ ಜರ್ಸಿ ಬಿಡುಗಡೆಗೆ ಸಂಬಂಧಿಸಿದ ಪ್ರಚಾರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿತ್ತು. ಆ ವಿಡಿಯೋದಲ್ಲಿ ನಾಯಕ ಎಂಎಸ್ ಧೋನಿ ಅವರ ಎಂಟ್ರಿ ವೇಳೆ ‘ಜೈಲರ್’ ಮತ್ತು ‘ಜೈಲರ್ 2’ ಮತ್ತು ‘ಕೂಲಿ’ ಸಿನಿಮಾಗಳ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಿನಿಮಾಗಳ ಹಕ್ಕುಗಳು ತಮ್ಮದಾಗಿದ್ದು, ಯಾವುದೇ ಅನುಮತಿ ಪಡೆಯದೇ ಬಳಸಲಾಗಿದೆ ಎಂದು ಸನ್ ಪಿಕ್ಚರ್ಸ್ ಅಸಮಾಧಾನ ವ್ಯಕ್ತಪಡಿಸಿದೆ.

ಇದನ್ನೂ ಓದಿ:

ಈ ಹಿನ್ನೆಲೆಯಲ್ಲಿ ಸನ್ ಪಿಕ್ಚರ್ಸ್ ಮದ್ರಾಸ್ ಹೈ ಕೋರ್ಟ್ ನಲ್ಲಿ ಸಿಎಸ್‌ಕೆ ವಿರುದ್ಧ ದಾವೆ ಹೂಡಿದೆ. ಚಿತ್ರಗಳ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಎಲ್ಲಾ ಹಕ್ಕುಗಳು ಸನ್ ಪಿಕ್ಚರ್ಸ್ ಬಳಿ ಇವೆ ಎಂದು ವಾದಿಸಲಾಗಿದೆ. ವಿಡಿಯೋವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗಿದೆ ಎಂದು ಹೇಳಿ 1 ಕೋಟಿ ರೂಪಾಯಿ ಪರಿಹಾರ ಹಾಗೂ ಮುಂದಿನ ದಿನಗಳಲ್ಲಿ ಈ ಸಂಗೀತ ಬಳಸುವುದನ್ನು ತಡೆಯಲು ಮನವಿ ಮಾಡಲಾಗಿದೆ.

ಸಿಎಸ್‌ಕೆ ಪರ ವಕೀಲರು ಆಕ್ಷೇಪಾರ್ಹ ವಿಡಿಯೋಗಳನ್ನು ಈಗಾಗಲೇ ತೆಗೆದುಹಾಕಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ರಾಮಮೂರ್ತಿ ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 16ಕ್ಕೆ ಮುಂದೂಡಿದ್ದಾರೆ.

Must Read