ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರುಶನ ಕರುಣಿಸುವ ಹಾಸನಾಂಬ ದೇವಿ ದೇವಾಲಯದಲ್ಲಿ ಭಕ್ತರ ದೊಡ್ಡ ಪ್ರಮಾಣದ ಆಗಮನದ ನಡುವೆ ಕರ್ತವ್ಯ ಲೋಪದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ನಾಲ್ವರು ಕಂದಾಯ ಇಲಾಖೆ ಸಿಬ್ಬಂದಿಯನ್ನು ಅಮಾನತು ಮಾಡುವ ಆದೇಶ ಹೊರಡಿಸಿದ್ದಾರೆ.
ಅಮಾನತಾದ ಸಿಬ್ಬಂದಿಗಳಲ್ಲಿ ಆರ್‌ಐ ಗೋವಿಂದರಾಜ್ ಹಾಗೂ ಯೋಗಾನಂದ್, ವಿಎ ಸಂತೋಷ್ ಅಂಬಿಗರ ಮತ್ತು ಶಿರಾಜ್ ಮಹಿಮಾ ಪಟೇಲ್ ಸೇರಿದ್ದಾರೆ. ಈ ಅಧಿಕಾರಿಗಳು ಗೋಲ್ಡ್ ಕಾರ್ಡ್ ಕೌಂಟರ್‌ನಲ್ಲಿ ಕಾರ್ಡ್ ಸ್ಕ್ಯಾನ್ ಮಾಡದೇ ಭಕ್ತರನ್ನು ದೇವಾಲಯದ ಒಳಗೆ ಬಿಡುವ ಮೂಲಕ ಕರ್ತವ್ಯ ಲೋಪ ತೋರಿದ್ದಾರೆ ಎಂಬ ಆರೋಪ ಎದುರಿಸಿದ್ದಾರೆ. ಇದೇ ವೇಳೆ ಮೊದಲ ದಿನವೂ ಐಡಿ ಕಾರ್ಡ್ ದುರುಪಯೋಗದ ಪ್ರಕರಣದಲ್ಲಿ ಇಬ್ಬರು ವಾರ್ಡನ್‌ಗಳನ್ನು ಅಮಾನತು ಮಾಡಲಾಗಿತ್ತು.
ಹಾಸನಾಂಬ ದೇವಿ ದರ್ಶನಕ್ಕೆ ಶನಿವಾರ (ಅಕ್ಟೋಬರ್ 11) ಮುಂಜಾನೆ 4 ಗಂಟೆಯಿಂದಲೇ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿ ದರುಶನ ಪಡೆದರು. ಕೆಲವರು ಮಧ್ಯರಾತ್ರಿಯಿಂದಲೇ ಸರತಿಯಲ್ಲಿ ಕಾದು ನಿಂತಿದ್ದರು. ವೀಕೆಂಡ್ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಿತ್ತು. 1000 ರೂ. ಟಿಕೆಟ್‌ನ ಸಾಲು ಖಾಲಿಯಾಗಿದ್ದರೆ, 300 ರೂ. ಟಿಕೆಟ್‌ನ ದರುಶನ ಸಾಲು ಸಂಪೂರ್ಣ ಭರ್ತಿಯಾಗಿತ್ತು.
ಇಂದು (ಅಕ್ಟೋಬರ್ 12) ರಜೆ ಇರುವುದರಿಂದ ಭಕ್ತರ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ದೇವಾಲಯದಲ್ಲಿ ಭಕ್ತರ ನಿರ್ವಹಣೆಗೆ ಜಿಲ್ಲಾಡಳಿತದಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.