Thursday, October 23, 2025

ಬಿಹಾರ ಚುನಾವಣೆ ಹೊತ್ತಲ್ಲೇ RJDಗೆ ಬಿಗ್ ಶಾಕ್: ಲಾಲು ಕುಟುಂಬಕ್ಕೆ ದೋಷಾರೋಪದ ಸಂಕಷ್ಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿ, ರಾಜಕೀಯ ಚಟುವಟಿಕೆಗಳು ಗರಿಗೆದರಿರುವಾಗಲೇ ರಾಷ್ಟ್ರೀಯ ಜನತಾ ದಳ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಕುಟುಂಬಕ್ಕೆ ದೊಡ್ಡ ಹಿನ್ನಡೆಯಾಗಿದೆ. ಭಾರತೀಯ ರೈಲ್ವೇಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದಂತೆ, ಲಾಲು ಪ್ರಸಾದ್, ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಹಾಗೂ ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ವಿರುದ್ಧ ನ್ಯಾಯಾಲಯವು ದೋಷಾರೋಪಗಳನ್ನು ನಿಗದಿಪಡಿಸಿದೆ.

ಏನಿದು ಪ್ರಕರಣ?

IRCTCಯ ಎರಡು ಹೋಟೆಲ್‌ಗಳನ್ನು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡುವಾಗ ಅವ್ಯವಹಾರ ನಡೆದಿದೆ ಎಂಬ ಆರೋಪ ಈ ಪ್ರಕರಣದ ಕೇಂದ್ರಬಿಂದುವಾಗಿದೆ. ವಿಶೇಷ ನ್ಯಾಯಾಧೀಶ ವಿಶಾಲ್ ಗೊಗ್ನೆ ಅವರು, ರಾಬ್ಡಿ ದೇವಿ ಮತ್ತು ತೇಜಸ್ವಿ ಯಾದವ್ ವಿರುದ್ಧ ಕ್ರಿಮಿನಲ್ ಸಂಚು ಮತ್ತು ಮೋಸದ ಆರೋಪಗಳನ್ನು ಹೊರಿಸಿದ್ದಾರೆ.

ಕೋರ್ಟ್‌ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದು, “ನೀವು ಪಿತೂರಿಯಲ್ಲಿ ತೊಡಗಿದ್ದೀರಿ ಮತ್ತು ಸರ್ಕಾರದ ಸೇವಕರಾಗಿ ನಿಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದೀರಿ. ನೀವು ಟೆಂಡರ್‌ ಮೇಲೆ ಪ್ರಭಾವ ಬೀರಿದ್ದೀರಿ ಮತ್ತು ಅರ್ಹತಾ ಷರತ್ತುಗಳನ್ನು ನಿಮಗೆ ಬೇಕಾದಂತೆ ಬದಲಾಯಿಸಿದ್ದೀರಿ,” ಎಂದು ಹೇಳಿದೆ.

ಭ್ರಷ್ಟಾಚಾರ ತಡೆ ಕಾಯ್ದೆಯಡಿ ಆರೋಪ:

ನ್ಯಾಯಾಲಯವು ಲಾಲು ಪ್ರಸಾದ್ ಯಾದವ್ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿಯೂ ಆರೋಪಗಳನ್ನು ನಿಗದಿಪಡಿಸಿದೆ. ದೋಷಾರೋಪ ನಿಗದಿ ಮಾಡುವ ಆದೇಶದ ವೇಳೆ, ಮೂವರು ಆರೋಪಿಗಳು ಖುದ್ದಾಗಿ ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ಸೆಪ್ಟೆಂಬರ್ 24ರಂದೇ ಕೋರ್ಟ್‌ ಸೂಚಿಸಿತ್ತು.

ಈ ದೋಷಾರೋಪ ನಿಗದಿ ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳಿರುವಾಗ ನಡೆದಿದ್ದು, ಇದು RJD ಪಕ್ಷಕ್ಕೆ ದೊಡ್ಡ ರಾಜಕೀಯ ಹೊಡೆತ ನೀಡುವ ಸಾಧ್ಯತೆ ಇದೆ.

error: Content is protected !!