ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ನಿಷೇಧಿತ ಕೋನೋ ಕಾರ್ಪಸ್, ಸಾಮಾನ್ಯವಾಗಿ ‘ದುಬೈ ಗಿಡ’ ಎಂದು ಕರೆಯಲ್ಪಡುವ ಸಸ್ಯಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ನೆಟ್ಟು ಪೋಷಿಸುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಗಿಡಗಳು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದು ಪರಿಸರ ಪ್ರೇಮಿಗಳು ಕಳೆದ ವರ್ಷವೇ ದೂರು ಸಲ್ಲಿಸಿದ್ದರು. ಆದರೂ ಜಿಬಿಎ ಸುಮಾರು 5,500 ‘ದುಬೈ ಗಿಡ’ಗಳನ್ನು ತನ್ನ ವ್ಯಾಪ್ತಿಯಲ್ಲಿ ನಿರ್ವಹಿಸುತ್ತಿದ್ದು, ಈ ಬಗ್ಗೆ ಮೌನ ವಹಿಸಿದೆ.
ಹಲವು ರಾಜ್ಯಗಳಲ್ಲಿ ಬ್ಯಾನ್, ಬೆಂಗಳೂರಿನಲ್ಲಿ ‘ಗ್ರೀನ್ ಸಿಗ್ನಲ್’!
‘ದುಬೈ ಗಿಡ’ದ ಅಪಾಯವನ್ನು ಮನಗಂಡು ಈಗಾಗಲೇ ಆಂಧ್ರಪ್ರದೇಶ, ಗುಜರಾತ್ ಮತ್ತು ತೆಲಂಗಾಣದಂತಹ ರಾಜ್ಯಗಳಲ್ಲಿ ಇದನ್ನು ನಿಷೇಧಿಸಲಾಗಿದೆ. ಅಲ್ಲದೆ, ಸುಪ್ರೀಂಕೋರ್ಟ್ ಸಹ ಈ ಗಿಡಗಳನ್ನು ಬೆಳೆಸದಂತೆ ಸೂಚಿಸಿದೆ. ಆದರೂ, ಬೆಂಗಳೂರಿನ ರಸ್ತೆಗಳಲ್ಲಿ ವರ್ಷ ಕಳೆದರೂ ಈ ಗಿಡಗಳ ತೆರವು ಆಗಿಲ್ಲ. ನಿರ್ವಹಣೆ ಸುಲಭ ಎಂಬ ಕಾರಣಕ್ಕಾಗಿ ಜಿಬಿಎ ಇದೇ ಗಿಡಗಳ ಪೋಷಣೆ ಮುಂದುವರಿಸಿದೆ ಎನ್ನಲಾಗಿದೆ.
ಆರೋಗ್ಯಕ್ಕೆ ಮಾರಕ, ಆಮ್ಲಜನಕಕ್ಕೆ ಕುತ್ತು?
ಬೆಂಗಳೂರಿನ ರಸ್ತೆಗಳಲ್ಲಿ ಈ ಗಿಡಗಳು ಈಗಾಗಲೇ ಆಳೆತ್ತರಕ್ಕೆ ಬೆಳೆದು ನಿಂತಿವೆ. ‘ದುಬೈ ಗಿಡ’ದ ಪರಾಗವು ಅಸ್ತಮಾ ಮತ್ತು ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತಿದೆ. ಇನ್ನೂ ಆತಂಕಕಾರಿ ಸಂಗತಿ ಎಂದರೆ, ಈ ‘ಡೇಂಜರ್ ಟ್ರೀ’ ಆಮ್ಲಜನಕದ ಬದಲು ಕಾರ್ಬನ್ ಡೈಆಕ್ಸೈಡ್ ಅನ್ನು ಹೆಚ್ಚು ಬಿಡುಗಡೆ ಮಾಡುತ್ತದೆ ಎಂಬ ಮಾತುಗಳು ಕೇಳಿಬಂದಿವೆ.
ಸದ್ಯ ರಾಜಧಾನಿಯ ರಸ್ತೆಗಳಲ್ಲಿ ಬೆಳೆದಿರುವ ಈ ಅಪಾಯಕಾರಿ ಗಿಡಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಪರಿಸರ ಪ್ರೇಮಿಗಳು ತೀವ್ರವಾಗಿ ಆಗ್ರಹಿಸಿದ್ದಾರೆ. ಆದರೆ, ಜಿಬಿಎ ಅಧಿಕಾರಿಗಳು ಮಾತ್ರ ಸರ್ಕಾರದ ಧೋರಣೆಗೆ ಕಾಯುತ್ತಿದ್ದಾರೆ.
“ಸುಪ್ರೀಂಕೋರ್ಟ್ ಸೂಚನೆ ನೀಡಿದ್ದರೂ, ಇಲ್ಲಿ ಸರ್ಕಾರದ ಸೂಚನೆ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ” ಎಂದು ಜಿಬಿಎ ಅಧಿಕಾರಿಗಳು ಹೇಳುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನ್ಯಾಯಾಲಯದ ಮತ್ತು ಆರೋಗ್ಯದ ಕಾಳಜಿಯನ್ನು ಕಡೆಗಣಿಸಿ, ಜಿಬಿಎ ಅಧಿಕಾರಿಗಳು ‘ಸರಕಾರದ ಸೂಚನೆ’ಯ ನೆಪ ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬಂದಿವೆ.

