March 10, 2026
Tuesday, March 10, 2026
spot_img

ಬಳ್ಳಾರಿಯಿಂದ ದುಬೈಗೆ ಹೋಗಿದ್ದ 50 ಜನರ ಟೀಮ್ ಸುರಕ್ಷಿತ: ವಿಡಿಯೋ ಮೂಲಕ ಶಾಸಕರ ಸ್ಪಷ್ಟನೆ

ಹೊಸದಿಗಂತ ಬಳ್ಳಾರಿ:

ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವಿನ ಭೀಕರ ವೈಮಾನಿಕ ಸಂಘರ್ಷದ ಕಿಚ್ಚು ದುಬೈನಲ್ಲಿದ್ದ ಕನ್ನಡಿಗರನ್ನು ಆತಂಕಕ್ಕೆ ತಳ್ಳಿತ್ತು. ಪ್ರವಾಸಕ್ಕಾಗಿ ದುಬೈಗೆ ತೆರಳಿದ್ದ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಜಿಲ್ಲೆಯ ಸುಮಾರು 50 ಜನರ ತಂಡ ಅಲ್ಲಿನ ವಿಮಾನಯಾನ ವ್ಯತ್ಯಯದಿಂದಾಗಿ ಅತಂತ್ರರಾಗಿದ್ದರು. ಈ ಸುದ್ದಿ ಬಳ್ಳಾರಿಯಲ್ಲಿ ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು.

ಆದರೆ, ಈಗ ಶಾಸಕ ನಾರಾ ಭರತ್ ರೆಡ್ಡಿ ಅವರು ವಿಡಿಯೋ ಬಿಡುಗಡೆ ಮಾಡುವ ಮೂಲಕ ಎಲ್ಲರಿಗೂ ಸಮಾಧಾನದ ಸುದ್ದಿ ನೀಡಿದ್ದಾರೆ.

ಶಾಸಕರು, ಅವರ ಕುಟುಂಬ ಸದಸ್ಯರು ಹಾಗೂ ಬಳ್ಳಾರಿಯ 35 ಮತ್ತು ಸಿರುಗುಪ್ಪದ 15 ಜನರು ಸೇರಿದಂತೆ ಒಟ್ಟು 50 ಮಂದಿಯ ತಂಡ ಸುರಕ್ಷಿತವಾಗಿದೆ.

ಈ ಮೊದಲು ತಂಡದ ಸದಸ್ಯರು ವಿಡಿಯೋ ಕಾಲ್ ಮೂಲಕ ಕಳವಳ ವ್ಯಕ್ತಪಡಿಸಿದ್ದರು. ಶಾಸಕರು ದೌರ್ಬಲ್ಯ ತೋರಿಸದೆ ಕೇವಲ ಆಪ್ತರ ಜೊತೆ ಸಂಪರ್ಕದಲ್ಲಿದ್ದರು. ಈಗ ಸ್ವತಃ ವಿಡಿಯೋ ಮಾಡಿ ಅಭಿಮಾನಿಗಳ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಕರ್ನಾಟಕ ಸರ್ಕಾರ ಮತ್ತು ಶಾಸಕರ ಕಚೇರಿಯ ಸಿಬ್ಬಂದಿ ಸಮನ್ವಯ ಸಾಧಿಸಿ ಎಲ್ಲರಿಗೂ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿದ್ದಾರೆ. “ನಾವೆಲ್ಲರೂ ಕ್ಷೇಮವಾಗಿದ್ದೇವೆ, ಪ್ರತಿಯೊಬ್ಬರೊಂದಿಗೂ ನಾನು ಸಂಪರ್ಕದಲ್ಲಿದ್ದೇನೆ, ಯಾರೂ ಗಾಬರಿಯಾಗುವ ಅಗತ್ಯವಿಲ್ಲ” ಎಂದು ಶಾಸಕರು ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಪರಿಸ್ಥಿತಿಯಿಂದಾಗಿ ವಿಮಾನಯಾನಗಳಲ್ಲಿ ಏರುಪೇರಾಗಿದ್ದು, ಶೀಘ್ರದಲ್ಲೇ ಈ ತಂಡವು ತಾಯ್ನಾಡಿಗೆ ಮರಳುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !