ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಪ್ಟೆಂಬರ್ ತಿಂಗಳಿನಲ್ಲಿ ದೇಶದ ಚಿಲ್ಲರೆ ಹಣದುಬ್ಬರ ಬರೋಬ್ಬರಿ ಎಂಟು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದು ಗಮನಾರ್ಹ ಸಾಧನೆ ಮಾಡಿದೆ. ಈ ತಿಂಗಳಲ್ಲಿ ಹಣದುಬ್ಬರವು ಶೇ. 1.54 ರಷ್ಟು ದಾಖಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಹಣದುಬ್ಬರ ನಿಯಂತ್ರಣಕ್ಕಾಗಿ ಶೇ. 2 ರಿಂದ ಶೇ. 6 ರಷ್ಟರ ತಾಳಿಕೆ ಮಿತಿ ನಿಗದಿಪಡಿಸಿದೆ. ಸರ್ಕಾರವು ಆರ್ಬಿಐಗೆ ಹಣದುಬ್ಬರವನ್ನು ಶೇ. 4ಕ್ಕೆ ಕಟ್ಟಿಹಾಕಲು ನಿರ್ದೇಶನ ನೀಡಿದೆ. ಹಲವು ತಿಂಗಳ ನಂತರ ಮೊದಲ ಬಾರಿಗೆ, ಸೆಪ್ಟೆಂಬರ್‌ನಲ್ಲಿ ದಾಖಲಾದ ಶೇ. 1.54ರ ಹಣದುಬ್ಬರವು ಆರ್ಬಿಐನ ಈ ನಿಗದಿತ ತಾಳಿಕೆ ಶ್ರೇಣಿಯ ಕೆಳಗೆ ಇಳಿದಿದೆ. 2017ರ ಜೂನ್ ನಂತರ ಯಾವುದೇ ತಿಂಗಳಲ್ಲೂ ಇಷ್ಟು ಕಡಿಮೆ ಹಣದುಬ್ಬರ ದಾಖಲಾಗಿರಲಿಲ್ಲ.
ಕಳೆದ ತಿಂಗಳು ಅಂದರೆ ಆಗಸ್ಟ್‌ನಲ್ಲಿ ಹಣದುಬ್ಬರವು ಶೇ. 2.07 ರಷ್ಟಿತ್ತು. ಇದರೊಂದಿಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ಹಣದುಬ್ಬರ ಬರೋಬ್ಬರಿ 53 ಬೇಸಿಸ್ ಪಾಯಿಂಟ್ಸ್‌ನಷ್ಟು ತಗ್ಗಿದೆ. ಹಣದುಬ್ಬರವು ಶೇ. 2ರ ಗಡಿಗಿಂತ ಕೆಳಗೆ ಇಳಿಯಬಹುದು ಎಂದು ಆರ್ಥಿಕ ತಜ್ಞರು ನಿರೀಕ್ಷಿಸಿದ್ದರೂ, ಅವರ ನಿರೀಕ್ಷೆಗೂ ಮೀರಿ ಹೆಚ್ಚಿನ ಮಟ್ಟದಲ್ಲಿ ಕುಸಿತ ಕಂಡಿರುವುದು ಆರ್ಥಿಕ ವಲಯದಲ್ಲಿ ಸಮಾಧಾನ ತಂದಿದೆ.
ಕುಸಿತಕ್ಕೆ ಪ್ರಮುಖ ಕಾರಣಗಳು
2022ರಲ್ಲಿ ಶೇ. 7ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿದ್ದ ಹಣದುಬ್ಬರವು ಸತತವಾಗಿ ಕಡಿಮೆಗೊಳ್ಳುತ್ತಾ ಬಂದಿದೆ. ಇದಕ್ಕೆ ಆರ್ಬಿಐನ ರೆಪೋ ದರ ಏರಿಕೆ ಕ್ರಮಗಳು, ಅನುಕೂಲಕರ ಹವಾಮಾನ ಮತ್ತು ಉತ್ತಮ ಕೃಷಿ ಫಸಲು ಪ್ರಮುಖ ಕಾರಣಗಳಾಗಿವೆ.
ಸೆಪ್ಟೆಂಬರ್‌ನಲ್ಲಿ ಹಣದುಬ್ಬರ ಗಣನೀಯವಾಗಿ ಕಡಿಮೆ ಆಗಲು ಅತ್ಯಂತ ಪ್ರಮುಖ ಕಾರಣವೆಂದರೆ ಆಹಾರವಸ್ತುಗಳ ಬೆಲೆಯಲ್ಲಿನ ತೀವ್ರ ಇಳಿಕೆ. ಚಿಲ್ಲರೆ ಹಣದುಬ್ಬರ ಲೆಕ್ಕಾಚಾರದಲ್ಲಿ ಆಹಾರವಸ್ತುಗಳ ಬೆಲೆಗೆ ಅರ್ಧದಷ್ಟು ತೂಕ ಇರುತ್ತದೆ.
ಸೆಪ್ಟೆಂಬರ್‌ನಲ್ಲಿ ಆಯ್ದ ಆಹಾರವಸ್ತುಗಳ ಸರಾಸರಿ ಬೆಲೆ ಮೈನಸ್ 2.28 ರಷ್ಟಿದೆ. ಅಂದರೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಅವುಗಳ ಬೆಲೆ ಕಡಿಮೆ ಆಗಿದೆ.
ಆಹಾರ ವಸ್ತುಗಳ ಪೈಕಿ ತರಕಾರಿ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಸೆಪ್ಟೆಂಬರ್‌ನಲ್ಲಿ ತರಕಾರಿ ಬೆಲೆ ಶೇ. 21.38 ರಷ್ಟು ಕಡಿಮೆ ಆಗಿದೆ. ಹಿಂದಿನ ತಿಂಗಳು ಆಗಸ್ಟ್‌ನಲ್ಲಿ ಶೇ. 15.92 ರಷ್ಟು ತಗ್ಗಿತ್ತು. ಈ ಎರಡು ತಿಂಗಳಿನಲ್ಲಿ ಒಟ್ಟು ಶೇ. 37ರಷ್ಟು ಬೆಲೆ ಕಡಿಮೆಯಾಗಿರುವುದು ಒಟ್ಟಾರೆ ಹಣದುಬ್ಬರ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.

