ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೀದರ್ ಜಿಲ್ಲಾದ್ಯಂತ ಸುರಿದ ಭಾರಿ ಮಳೆಯಿಂದ ಉಂಟಾದ ಬೆಳೆ ಹಾನಿಯ ಪ್ರಮಾಣವನ್ನು ಖುದ್ದು ವೀಕ್ಷಿಸಲು ಭಾರತೀಯ ಜನತಾ ಪಕ್ಷದ ಜಿಲ್ಲಾ ಮುಖಂಡರು ಸಂಚರಿಸಿದರು. ಈ ಸಂದರ್ಭದಲ್ಲಿ ಶಾಸಕ ಪ್ರಭು ಚವ್ಹಾಣ್ ಅವರು ಬೆಳೆ ನಷ್ಟದ ಗಂಭೀರತೆಯನ್ನು ವಿವರಿಸಿ, ಸಂತ್ರಸ್ತ ರೈತರಿಗೆ ತಕ್ಷಣ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಅವರ ನೇತೃತ್ವದಲ್ಲಿ ಸಮೀಕ್ಷೆ ನಡೆಸಲಾಯಿತು. ತಂಡವು ಕೌಠಾ(ಬಿ) ಗ್ರಾಮಕ್ಕೆ ಟ್ರ್ಯಾಕ್ಟರ್ ಮೂಲಕ ತೆರಳಿ ಹಾನಿಗೊಳಗಾದ ಕೃಷಿ ಭೂಮಿಗಳನ್ನು ಪರಿಶೀಲಿಸಿ ರೈತರಿಂದ ಮಾಹಿತಿ ಪಡೆದುಕೊಂಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪ್ರಭು ಚವ್ಹಾಣ್ ಅವರು, ಔರಾದ್(ಬಿ) ಕ್ಷೇತ್ರದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ ಎಂದು ತಿಳಿಸಿದರು. “ಪ್ರತಿಯೊಂದು ಗ್ರಾಮದಲ್ಲಿಯೂ ಸಾವಿರಾರು ಎಕರೆಯಷ್ಟು ಬೆಳೆ ನಷ್ಟವಾಗಿದೆ. ಇಲ್ಲಿನ ಬಹುತೇಕ ರೈತರು ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ಬೆಳೆದು ನಿಂತಿದ್ದ ಉದ್ದು, ಹೆಸರು, ಸೋಯಾಬೀನ್, ತೊಗರಿ, ಹತ್ತಿ, ಕಬ್ಬು ಸೇರಿದಂತೆ ಎಲ್ಲ ಬೆಳೆಗಳು ಜಲಾವೃತಗೊಂಡು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ,” ಎಂದು ಪರಿಸ್ಥಿತಿಯ ದುರಂತವನ್ನು ವಿವರಿಸಿದರು.
ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದು, ಆರಂಭದಲ್ಲಿ ಉತ್ತಮ ಮಳೆಯಿಂದ ಸಮೃದ್ಧ ಫಸಲಿನ ನಿರೀಕ್ಷೆಯಲ್ಲಿದ್ದೆವು, ಆದರೆ ಅನಿರೀಕ್ಷಿತ ಧಾರಾಕಾರ ಮಳೆಗೆ ನದಿ ತೀರದ ಹೊಲಗಳು ಸಂಪೂರ್ಣ ಮುಳುಗಡೆಯಾಗಿ ಎಲ್ಲ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ಬೆಳೆ ಕಳೆದುಕೊಂಡ ರೈತರಿಗೆ ಸರ್ಕಾರ ತ್ವರಿತವಾಗಿ ಪರಿಹಾರ ನೀಡಲು ಪಕ್ಷದ ಮುಖಂಡರು ಸಹಕರಿಸಬೇಕು ಎಂದು ಮನವಿ ಮಾಡಿದರು. ಬಿಜೆಪಿ ತಂಡವು ರೈತರ ಪರವಾಗಿ ನಿಂತು ಸರ್ಕಾರದ ಮಟ್ಟದಲ್ಲಿ ಪರಿಹಾರಕ್ಕಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿತು.