Wednesday, October 22, 2025

ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ: ಪಂದ್ಯಕ್ಕೂ ಮುನ್ನ ಆಸೀಸ್ ತಂಡಕ್ಕೆ ಶಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್: :

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಹುನಿರೀಕ್ಷಿತ ಏಕದಿನ ಸರಣಿ ಅಕ್ಟೋಬರ್ 19ರಂದು ಕಾಂಗರೂ ನಾಡಿನಲ್ಲಿ ಪ್ರಾರಂಭವಾಗಲಿದೆ. ಈ ಸರಣಿಯಲ್ಲಿ ಒಟ್ಟು ಮೂರು ಏಕದಿನ ಪಂದ್ಯಗಳಿದ್ದು, ಬಳಿಕ ಟಿ20 ಸರಣಿಯೂ ನಡೆಯಲಿದೆ. ಆದರೆ ಮೊದಲ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಎರಡು ಪ್ರಮುಖ ಆಘಾತಗಳು ಎದುರಾಗಿವೆ.

ಪರ್ಥ್‌ನಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಿಂದ ಆಸ್ಟ್ರೇಲಿಯಾದ ಸ್ಪಿನ್ನರ್ ಆ್ಯಡಂ ಝಂಪಾ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಜೋಶ್ ಇಂಗ್ಲಿಸ್ ಹೊರಗುಳಿಯಲಿದ್ದಾರೆ. ಝಂಪಾ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಾರಣ ಪಂದ್ಯದಿಂದ ದೂರ ಉಳಿಯಲಿದ್ದಾರೆ. ಮತ್ತೊಂದೆಡೆ, ಇಂಗ್ಲಿಸ್ ಕಾಲಿನ ಸ್ನಾಯು ಸೆಳೆತದಿಂದ ಬಳಲುತ್ತಿದ್ದು, ವೈದ್ಯಕೀಯ ಸಲಹೆಯ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಇಬ್ಬರೂ ದ್ವಿತೀಯ ಏಕದಿನ ಪಂದ್ಯದಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆಂದು ನಿರೀಕ್ಷಿಸಲಾಗಿದೆ.

ಇವರ ಬದಲಿಗೆ ಆಸೀಸ್ ತಂಡ ಮೊದಲ ಏಕದಿನ ಪಂದ್ಯಕ್ಕಾಗಿ ಮ್ಯಾಥ್ಯೂ ಕುಹ್ನೆಮನ್ ಹಾಗೂ ಜೋಶ್ ಫಿಲಿಪ್ ಅವರನ್ನು ಸೇರಿಸಿಕೊಂಡಿದೆ. ಫಿಲಿಪ್ ಅಥವಾ ಅಲೆಕ್ಸ್ ಕ್ಯಾರಿ ವಿಕೆಟ್ ಕೀಪರ್ ಆಗಿ ಮೊದಲ ಪಂದ್ಯದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆಸ್ಟ್ರೇಲಿಯಾ ತಂಡವನ್ನು ಮಿಚೆಲ್ ಮಾರ್ಷ್ ಮುನ್ನಡೆಸಲಿದ್ದು, ಟ್ರಾವಿಸ್ ಹೆಡ್, ಕ್ಯಾಮರೋನ್ ಗ್ರೀನ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್‌ವುಡ್ ಮೊದಲಾದವರು ತಂಡದಲ್ಲಿದ್ದಾರೆ.

error: Content is protected !!