ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸ ನಡೆಯುತ್ತಿದೆ. ಇಷ್ಟೆಲ್ಲ ಆದರೂ ನಗರದ ರಸ್ತೆಗುಂಡಿ ಸಮಸ್ಯೆ ಮುಂದುವರಿದಿದ್ದು, ಈ ಬಗ್ಗೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಮಾಡಿರುವ ಎಕ್ಸ್ ಪೋಸ್ಟ್ ವೈರಲ್ ಆಗಿದೆ.
ಬಯೋಕಾನ್ ಪಾರ್ಕ್ಗೆ ಚೀನಾದಿಂದ ಬಂದಿದ್ದ ಉದ್ಯಮಿಯೊಬ್ಬರು ಬೆಂಗಳೂರು ನಗರದ ರಸ್ತೆಗಳು ಇಷ್ಟೊಂದು ಹಾಳಾಗಿವೆ? ಕಂಡ ಕಂಡಲ್ಲಿ ಕಸದ ರಾಶಿ ಯಾಕಿದೆ? ಇಲ್ಲಿನ ಸರ್ಕಾರ ಹೂಡಿಕೆದಾರರಿಗೆ ಬೆಂಬಲ ನೀಡುತ್ತಿಲ್ಲವೇ ಎಂದು ನನ್ನನ್ನು ಪ್ರಶ್ನಿಸಿದ್ದಾರೆ ಎಂದು ಮಜುಂದಾರ್ ಶಾ ಹೇಳಿದ್ದಾರೆ. ಪೋಸ್ಟ್ ನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆಗೆ ಟ್ಯಾಗ್ ಮಾಡಿದ್ದಾರೆ.
ಇದಕ್ಕೆ ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿಗೆ ಉದ್ಯಮಿಗಳದ್ದು ಅವರದ್ದೇ ಆದ ಕೊಡುಗೆ ಇದೆ. ಸಮಸ್ಯೆಗಳ ಬಗ್ಗೆ ಅವರು ಕರೆ ಮಾಡಿ ನಮ್ಮ ಜೊತೆ ಮಾತನಾಡಬಹುದು. ಎಲ್ಲರೂ ಅವರವರ ಪಾತ್ರ ನಿರ್ವಹಿಸಿದ್ರೆ ರಾಜ್ಯಕ್ಕೆ ಒಳ್ಳೇದು. ಕಸ ಹಾಕೋರು ಯಾರು? ಮೇಲಿಂದ ಬಂದು ಬೀಳುತ್ತಾ? ಹೀಗಾಗಿ ನಾಗರಿಕರು ತಮ್ಮ ಜವಾಬ್ದಾರಿ ಅರಿತುಕೊಂಡು ಸಹಾಕಾರ ನೀಡಬೇಕು ಎಂದಿದ್ದಾರೆ. ಅನ್ಯ ರಾಜ್ಯದವರು ಉದ್ಯಮಿಗಳಿಗೆ ಆಹ್ವಾನ ಕೊಡೋದು ಸಹಜ. ಆಂಧ್ರ ಐಟಿ ಮಿನಿಸ್ಟರ್ ಅಂತೂ ರಣಹದ್ದಿನಂತೆ ಕಾಯುತ್ತಿರುತ್ತಾರೆ. ಅಭಿವೃದ್ಧಿ ಬಗ್ಗೆ ಪ್ರತಿಪಕ್ಷ ಸಲಹೆ ಕೊಡಲ್ಲ, ಆ ನಿರೀಕ್ಷೆಯೂ ನಮಗಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿಗೆ ಕಿರಣ್ ಮಜುಂದಾರ್ ಅವರ ಕೊಡುಗೆ ಇದೆ. ಹಾಗೆಯೇ ಬೆಂಗಳೂರು ಕೂಡ ಕಿರಣ್ ಮಜುಂದಾರ್ಗೆ ಎಲ್ಲವೂ ಕೊಟ್ಟಿದೆ. ಮಳೆ ಆದ ಮೇಲೆ ಎಲ್ಲಾ ಕಡೆ ಹಾನಿಯಾಗಿ ಇಡೀ ರಾಜ್ಯದಲ್ಲಿ ಸಮಸ್ಯೆ ಆಗಿದೆ. ಮಳೆ ಬರುವಾಗ ರಸ್ತೆ ಗುಂಡಿ ಮುಚ್ಚುವುದಕ್ಕೆ ಆಗಲ್ಲ. ಹೀಗಿದ್ದರೂ ಗುಂಡಿಗಳನ್ನು ಮುಚ್ಚುತ್ತಿದ್ದೇವೆ. ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆಯೇ ವಿನಃ ಬೆಂಗಳೂರಿನಿಂದ ಹೋಗುವವರ ಸಂಖ್ಯೆ ಕಡಿಮೆ ಇದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಕಸ ಏನು ಮೇಲಿಂದ ಬೀಳತ್ತಾ? ಎಲ್ಲರೂ ಅವರವರ ಕೆಲಸ ಮಾಡಿದ್ರೆ ಸಾಕು: ಪ್ರಿಯಾಂಕ್ ಖರ್ಗೆ
