ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಕೀಯದಲ್ಲೂ ನನಗೆ ಯಾವುದೇ ಆಸಕ್ತಿಯಿಲ್ಲ, ಆದರೆ ಪ್ರಧಾನಿ ನರೇಂದ್ರ ಮೋದಿ ನನ್ನ ನೆಚ್ಚಿನ ಲೀಡರ್ ಎಂದು ಬ್ಯಾಡ್ಮಿಂಟನ್ ಸ್ಟಾರ್ ಸೈನಾ ನೆಹವಾಲ್ ಹೇಳಿದ್ದಾರೆ.
ಬ್ಯಾಡ್ಮಿಂಟನ್ ಆಟಕ್ಕಾಗಿ ನಾನು ತುಂಬಾ ತ್ಯಾಗ ಮಾಡಬೇಕಾಯಿತು. ನಾನೀಗ ಭಾರವಾದ ಹೃದಯದಿಂದ ಬ್ಯಾಡ್ಮಿಂಟನ್ ಆಟ ತೊರೆದಿದ್ದೇನೆ. ಆಟವಾಡುವ ಉತ್ಸಾಹವಿದ್ದರೂ, ದೇಹ ಸ್ಪಂದಿಸುವುದಿಲ್ಲ. ದೈಹಿಕ ಕ್ಷಮತೆಯ ಕಾರಣಕ್ಕೆ ಬ್ಯಾಡ್ಮಿಂಟನ್‌ಗೆ ವಿದಾಯ ಹೇಳುವುದು ನನಗೆ ಅನಿವಾರ್ಯವಾಗಿತ್ತು. ಸದ್ಯಕ್ಕಂತೂ ಬ್ಯಾಡ್ಮಿಂಟನ್ ಕೋಚಿಂಗ್ ನೀಡುವ ಬಗ್ಗೆ ನನಗೆ ಆಸಕ್ತಿಯಿಲ್ಲ ಎಂದು ಒಲಿಂಪಿಕ್ ಪದಕ ವಿಜೇತೆ ಸೈನಾ ನೆಹ್ವಾಲ್ ಹೇಳಿದ್ದಾರೆ.
ಹೈದರಾಬಾದ್‌ನಲ್ಲಿ ಬ್ಯಾಡ್ಮಿಂಟನ್ ತರಬೇತಿ ನೀಡುವ ಅತ್ಯುತ್ತಮ ಅಕಾಡೆಮಿ ಇದೆ. ನನ್ನ ಪತಿ ಪಾರುಪಳ್ಳಿ ಕಶ್ಯಪ್ ಕೂಡಾ ಪುಲ್ಲೇಲ ಗೋಪಿಚಂದ್ ಅವರ ಜತೆ ಕೆಲಸ ಮಾಡುತ್ತಿದ್ದಾರೆ. ಕೋಚಿಂಗ್ ತುಂಬಾ ಕಷ್ಟದ ಕೆಲಸ. ಬ್ಯಾಡ್ಮಿಂಟನ್ ಆಡುವುದಕ್ಕಿಂತಲೂ ಕೋಚಿಂಗ್‌ಗೆ ಹೆಚ್ಚಿನ ಪರಿಶ್ರಮ ಬೇಕಾಗುತ್ತದೆ. ಹತ್ತು-ಹದಿನೈದು ಗಂಟೆಗಳ ಕಾಲ ನಿಂತುಕೊಂಡೆ ಬೊಬ್ಬೆ ಹೊಡೆಯುತ್ತಾ ತರಬೇತಿ ನೀಡುವುದು ಸುಲಭವಲ್ಲ ಎಂದು ನೆಹ್ವಾಲ್ ಹೇಳಿದ್ದಾರೆ.
ಸದ್ಯ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಮಕ್ಕಳಿಗೆ ಪ್ರೇರಣೆ ನೀಡುವ ಕೆಲಸವನ್ನು ಮಾಡುತ್ತಿದ್ದೇನೆ. ಬ್ಯಾಡ್ಮಿಂಟನ್ ಮಾತ್ರವಲ್ಲ, ಎಲ್ಲಾ ಬಗೆಯ ಕ್ರೀಡೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳಬೇಕು. ಭವಿಷ್ಯದಲ್ಲಿ ಅಗತ್ಯ ಎನಿಸಿದರೆ ಮಾತ್ರ ಅಕಾಡೆಮಿಯಲ್ಲಿ ತೊಡಗಿಸಿಕೊಳ್ಳುವೆ. ಸದ್ಯ ಮಕ್ಕಳನ್ನು ಮೋಟಿವೇಟ್ ಮಾಡುವುದರಲ್ಲಿ ನನಗೆ ಸಂತೋಷವಿದೆ. ಗೋಪಿಚಂದ್ ಸರ್ ಹಾಗೂ ನನ್ನ ಪತಿ ಕಶ್ಯಪ್ ತುಂಬಾ ಆಕ್ಟಿವ್ ಆಗಿದ್ದಾರೆ. ಆಟಗಾರ್ತಿಯ ಮನಸ್ಥಿತಿಯಿಂದ ಇನ್ನಷ್ಟೇ ಹೊರಬರಬೇಕಿದೆ. ಸೋಷಿಯಲ್ ಮೀಡಿಯಾ ಬಿಟ್ಟು ಮಕ್ಕಳು ಮೈದಾನದತ್ತ ಬರಬೇಕು. ಹೀಗಾಗಿ ಅವರನ್ನು ಮೋಟಿವೇಟ್ ಮಾಡೋದ್ರಲ್ಲಿ ನನಗೆ ಸಂತೋಷವಿದೆ ಎಂದು ಸೈನಾ ಹೇಳಿದ್ದಾರೆ.
ಮೋದಿ ಫೇವರೇಟ್ ಲೀಡರ್
ನಾನು ರಾಜಕೀಯದಲ್ಲಿ ಅಷ್ಟೊಂದು ಸಕ್ರಿಯವಾಗಿಲ್ಲ. ನಾವು ಅಂದುಕೊಂಡಷ್ಟು ಅದು ಸುಲಭವಿಲ್ಲ. ನನಗೆ ರಾಜಕೀಯದಲ್ಲಿ ಯಾವುದೇ ಆಸಕ್ತಿಯಿಲ್ಲ. ಆದರೆ ನರೇಂದ್ರ ಮೋದಿಯವರ ಚಿಂತನೆ ನನಗೆ ತುಂಬಾ ಇಷ್ಟ. ರಾಜಕೀಯ ನಾಯಕರ ಪೈಕಿ ನರೇಂದ್ರ ಮೋದಿ ನನ್ನ ನೆಚ್ಚಿನ ನಾಯಕರು. ಕೆಲವೊಮ್ಮೆ ಅವರ ಇವೆಂಟ್‌ಗಳಿಗೆ ತೆರಳಿ ಬೆಂಬಲಿಸುತ್ತೇನೆ. ಮುಂದೆ ಯಾವತ್ತಾದರೂ ರಾಜಕೀಯದ ಬಗ್ಗೆ ಆಸಕ್ತಿ ಬಂದಾಗ ನೋಡೋಣ ಎಂದು ಸೈನಾ ನೆಹ್ವಾಲ್ ಹೇಳಿದ್ದಾರೆ.