ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ರಾಷ್ಟ್ರೀಯ ಭದ್ರತೆಯ ಕುರಿತಾಗಿ ಸಂವೇದನಾಶೀಲ ದಾಖಲೆಗಳನ್ನು ಅನಧಿಕೃತವಾಗಿ ಸಂಗ್ರಹಿಸಿದ್ದ ಆರೋಪದ ಮೇರೆಗೆ ಭಾರತೀಯ ಮೂಲದ ಖ್ಯಾತ ನೀತಿ ವಿಶ್ಲೇಷಕ ಆಶ್ಲೇ ಟೆಲ್ಲಿಸ್ ಅವರನ್ನು ಬಂಧಿಸಲಾಗಿದೆ. 64 ವರ್ಷದ ಟೆಲ್ಲಿಸ್, ತಮ್ಮ ಮನೆಯಲ್ಲಿ ಅಮೆರಿಕ ವಾಯುಪಡೆಯ ತಂತ್ರಗಳು ಮತ್ತು ರಕ್ಷಣಾ ವಿಧಾನಗಳಿಗೆ ಸಂಬಂಧಿಸಿದ ಸಾವಿರಕ್ಕೂ ಹೆಚ್ಚು ರಹಸ್ಯ ದಾಖಲೆಗಳನ್ನು ಇಟ್ಟುಕೊಂಡಿದ್ದರು ಎಂದು ಫೆಡರಲ್ ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ.
ಅವರನ್ನು ಶನಿವಾರ ಬಂಧಿಸಲಾಗಿದ್ದು, ಸೋಮವಾರ ಅಧಿಕೃತವಾಗಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಟೆಲ್ಲಿಸ್ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ. ಬುಷ್ ಆಡಳಿತಾವಧಿಯಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ, ಅವರು ವಿದೇಶಾಂಗ ಇಲಾಖೆಗೆ ಗೌರವ ಸಂಭಾವನೆ ರಹಿತ ಸಲಹೆಗಾರರಾಗಿಯೂ, ಪೆಂಟಗನ್‌ನ ನೆಟ್ ಅಸೆಸ್ಮೆಂಟ್ ಕಚೇರಿಗೆ ಗುತ್ತಿಗೆದಾರರಾಗಿಯೂ ಸೇವೆ ಸಲ್ಲಿಸಿದ್ದರು.
ಅಮೆರಿಕ ಸೇನಾ ವಿಮಾನಗಳ ಸಾಮರ್ಥ್ಯ ಮತ್ತು ರಕ್ಷಣಾ ರಹಸ್ಯಗಳ ಕುರಿತಾದ ದಾಖಲೆಗಳನ್ನು 2025ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಸರ್ಕಾರದ ಕಟ್ಟಡದಿಂದ ಕಳವು ಮಾಡಿ, ಲೆದರ್ ಬ್ರೀಫ್‌ಕೇಸ್‌ನಲ್ಲಿ ಹೊರತರುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದ್ದವು. ನಂತರ ಅವರ ಮನೆಯಲ್ಲಿ ನಡೆದ ಶೋಧದಲ್ಲಿ ಹಲವಾರು ಫೈಲ್‌ಗಳು, ಲಾಕ್ ಮಾಡಿದ್ದ ಕ್ಯಾಬಿನೆಟ್‌ಗಳು ಮತ್ತು ಕಸದ ಬುಟ್ಟಿಯಲ್ಲಿಯೂ ರಹಸ್ಯ ದಾಖಲೆಗಳು ಪತ್ತೆಯಾಗಿವೆ.
ಅಫಿಡವಿಟ್ ಪ್ರಕಾರ, ಟೆಲ್ಲಿಸ್ ಕಳೆದ ಕೆಲ ವರ್ಷಗಳಲ್ಲಿ ಚೀನಾ ಅಧಿಕಾರಿಗಳನ್ನು ಹಲವು ಬಾರಿ ಭೇಟಿಯಾಗಿದ್ದರು. 2023ರ ಏಪ್ರಿಲ್‌ನಲ್ಲಿ ನಡೆದ ಒಂದು ಔತಣಕೂಟದಲ್ಲಿ ಅವರು ಇರಾನ್-ಚೀನಾ ಸಂಬಂಧಗಳು ಮತ್ತು ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನಗಳ ಬಗ್ಗೆ ಚರ್ಚೆ ನಡೆಸಿದ್ದರು. ಅಲ್ಲದೆ, ಚೀನಾ ಅಧಿಕಾರಿಗಳಿಂದ ಉಡುಗೊರೆಗಳನ್ನು ಸ್ವೀಕರಿಸಿರುವುದನ್ನೂ ಎಫ್‌ಬಿಐ ಅನುಮಾನಾಸ್ಪದವೆಂದು ಪರಿಗಣಿಸಿದೆ.
ಮುಂಬೈನಲ್ಲಿ ಜನಿಸಿದ ಟೆಲ್ಲಿಸ್, ಸೇಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದು, ಚಿಕಾಗೋ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಅಮೆರಿಕ-ಭಾರತ-ಚೀನಾ ನೀತಿ ವಲಯದಲ್ಲಿ ಪ್ರಮುಖ ಧ್ವನಿಯಾಗಿ ಗುರುತಿಸಿಕೊಂಡಿದ್ದ ಅವರು, ಹಲವು ವರ್ಷಗಳಿಂದ ವಾಷಿಂಗ್ಟನ್ ಮತ್ತು ನವದೆಹಲಿಯ ರಾಜಕೀಯ ವಲಯಗಳಲ್ಲಿ ಸಕ್ರಿಯರಾಗಿದ್ದರು.