ಹೊಸದಿಗಂತ ವರದಿ ವಿಜಯನಗರ:
ವಿವಿಧ ಕಾರ್ಯಕ್ರಮಗಳ ನಿಮಿತ್ತ ನಾಲ್ಕು ದಿನಗಳ ಕಾಲ ವಿಜಯನಗರ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡಿ ಶ್ರೀ ಪಂಪಾ ವಿರೂಪಾಕ್ಷನ ದರ್ಶನ ಪಡೆದರು.
ಮಂಗಳವಾರ ರಾತ್ರಿ ಹೊಸಪೇಟೆಗೆ ಆಗಮಿಸಿರುವ ಅವರು ಇಲ್ಲಿನ ಜೆಂಗಲ್ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದರು. ಬುಧವಾರ ಬೆಳಗ್ಗೆಯೇ ಹಂಪಿಗೆ ಆಗಮಿಸಿದ ಅವರು, ಶ್ರೀ ಪಂಪಾ ವಿರೂಪಾಕ್ಷನ ಸನ್ನಿಧಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನಾಶೀರ್ವಾದ ಪಡೆದರು.
ಹಂಪಿಯ ಜಗದ್ಗುರು ವಿಧ್ಯಾರಣ್ಯ ಭಾರತಿ ಸ್ವಾಮೀಜಿ ಅವರು ಶ್ರೀ ಶಂಕರಾಚಾರ್ಯರರ ಫೋಟೋ ಸಹಿತ ದೇವರ ಫಲ-ಪುಷ್ಪ ಪ್ರಸಾದವನ್ನು ಸಚಿವರಿಗೆ ಪ್ರಸಾದಿಸಿದರು. ದೇವಸ್ಥಾನದ ಆನೆ ಲಕ್ಮೀ ಸಚಿವರಿಗೆ ಹಾರ ಹಾಕಿ ಆಶೀರ್ವದಿಸಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್, ಯುನೆಸ್ಕೊ ಗುರುತಿಸಿರುವ ಐತಿಹಾಸಿಕ ತಾಣ ಹಂಪಿಯ ಪ್ರತಿಯೊಂದು ಶಿಲೆಯೂ ಇಲ್ಲಿನ ಸಂಸ್ಕೃತಿ, ಶ್ರೀಮಂತಿಕೆ, ಪರಂಪರೆಯನ್ನ ಪ್ರತಿಬಿಂಬಿಸುತ್ತದೆ. ನನಗೆ ಬಹಳಷ್ಟು ಜನ ಹಂಪಿಗೆ ಭೇಟಿ ನಿಡುವಂತೆ ಹೇಳುತ್ತಿದ್ದರು. ಇಲ್ಲಿನ ಇತಿಹಾಸ ಪರಂಪರೆ ಬಗ್ಗೆ ಸಂಸದ ತುಕರಾಂ ಹಾಗೂ ರಾಜ ವಶಂಸ್ಥ ಶ್ರೀ ಕೃಷ್ಣದೇವರಾಯ ವಿವರಿಸಿದರು. ಹಂಪಿಯಲ್ಲಿ ಅನೇಕ ಉತ್ಖನನ ಮತ್ತು ಅಭಿವೃದ್ಧಿ ಕಾರ್ಯಗಳು ಕೂಡ ನಡೆಯುತ್ತಿವೆ. ಹಂಪಿಯ ಸಾಂಸ್ಕೃತಿಕ ಪರಂಪರೆಯನ್ನು ಕಣ್ತುಂಬಿಕೊಂಡಿದ್ದಕ್ಕೆ ನನಗೆ ಹೆಮ್ಮೆಯ ಅನುಭವವಾಗುತ್ತಿದೆ ಎಂದು ಸಂತಸ ಹಂಚಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿ.ಪಂ. ಸಿಇಓ ನೋಂಗ್ಜಾಯ್ ಅಕ್ರಮ ಅಲಿ ಷಾ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಹಣಾಧಿಕಾರಿ ಹನುಮಂತಪ್ಪ ಮತ್ತಿತರರು ಇದ್ದರು.