Tuesday, November 18, 2025

ಆಂಧ್ರಕ್ಕೆ Google AI Hub ಹೋಗಲು ಇದೇ ಕಾರಣ?: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

Google AI Hub ಆಂಧ್ರಪ್ರದೇಶಕ್ಕೆ ಸ್ಥಳಾಂತರಗೊಂಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿಯ ವಿರುದ್ಧ ಬೆಂಗಳೂರಿನಲ್ಲಿ ತೀವ್ರ ವಾಗ್ದಾಳಿ ನಡೆಸಿದರು. Google ನಮ್ಮೊಂದಿಗೆ ಚರ್ಚೆಗೆ ಬಂದಿದ್ದರೆ ನಾವು ಟೀಕೆ ಮಾಡುತ್ತಿದ್ದೆವು ಮತ್ತು ಚರ್ಚೆಗೆ ಬಂದ ಯಾವ ಕಂಪನಿಯನ್ನೂ ನಾವು ಬಿಟ್ಟಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಬಿಜೆಪಿಯವರು ಈ ವಿಚಾರವನ್ನು ‘ಬಹಳ ಸರಳವಾಗಿ ಮುಚ್ಚಿ ಹಾಕುತ್ತಾರೆ’ ಎಂದು ಆರೋಪಿಸಿದ ಖರ್ಗೆ, ಆಂಧ್ರಪ್ರದೇಶ ಸರ್ಕಾರಕ್ಕೆ ಕೇಂದ್ರದಿಂದ 22,000 ಕೋಟಿ ರೂಪಾಯಿಗಳ ಪ್ರೋತ್ಸಾಹಧನ ದೊರೆಯುತ್ತಿದೆ ಎಂದು ತಿಳಿಸಿದರು. ಇದರ ಜೊತೆಗೆ, ಆಂಧ್ರ ಸರ್ಕಾರವು ಶೇ. 25ರಷ್ಟು ಭೂ ರಿಯಾಯಿತಿ, ನೀರು ಮತ್ತು ವಿದ್ಯುತ್ ಉಚಿತವಾಗಿ ನೀಡುತ್ತಿದೆ ಹಾಗೂ ಶೇ. 100ರಷ್ಟು ರಾಜ್ಯ ಜಿಎಸ್‌ಟಿ ಮರುಪಾವತಿ ನೀಡುತ್ತಿದೆ ಎಂಬುದನ್ನು ಬಿಜೆಪಿಯವರು ಹೇಳುವುದಿಲ್ಲ ಎಂದು ಕಿಡಿಕಾರಿದರು.

“ಇದೇ ಸೌಲಭ್ಯಗಳನ್ನು ನಮ್ಮ ರಾಜ್ಯ ಕೊಟ್ಟಿದ್ದರೆ, ಬಿಜೆಪಿಯವರು ಸರ್ಕಾರ ದಿವಾಳಿತನಕ್ಕೆ ಮುಂದಾಗುತ್ತಿದೆ ಎನ್ನುತ್ತಿದ್ದರು” ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

Google AI Hub ಆಂಧ್ರಕ್ಕೆ ಹೋಗಿದ್ದರೂ, ಕರ್ನಾಟಕದ ಸಾಮರ್ಥ್ಯವನ್ನು ಸಚಿವರು ಎತ್ತಿ ಹಿಡಿದರು. “ನಾವು ಇಡೀ ಜಗತ್ತಿನ ಎಐ ಡೆವಲಪ್ಮೆಂಟ್‌ನಲ್ಲಿ 5ನೇ ಸ್ಥಾನದಲ್ಲಿ ಇದ್ದೇವೆ. ನಾವು ನಾಲ್ಕನೇ ದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಆಗಿದ್ದೇವೆ. ನಾವು ನಾಲ್ಕೂವರೆ ಲಕ್ಷ ಕೋಟಿ ರೂಪಾಯಿಗಳ ಐಟಿ ರಫ್ತು ಮಾಡುತ್ತೇವೆ. ಆಂಧ್ರಪ್ರದೇಶದ ರಫ್ತು ಕೇವಲ 2 ಲಕ್ಷ ಕೋಟಿ ಮಾತ್ರ” ಎಂದು ವ್ಯತ್ಯಾಸವನ್ನು ಒತ್ತಿ ಹೇಳಿದರು.

“ಆಂಧ್ರಪ್ರದೇಶ ಮತ್ತು ಕರ್ನಾಟಕದ ನಡುವೆ ವ್ಯತ್ಯಾಸ ಬಹಳ ದೊಡ್ಡದಿದೆ. ನಮ್ಮ ಬಳಿ ಕ್ವಾಂಟಮ್ ರೋಡ್ ಮ್ಯಾಪ್ ಇದೆ, ಅವರ ಬಳಿ ಇದೆಯಾ?” ಎಂದು ಪ್ರಶ್ನಿಸಿದರು. ಬಂಡವಾಳ ಹಾಕುವವರು ಎಲ್ಲಿ ಬೇಕಾದರೂ ಹಾಕುತ್ತಾರೆ. Google ಅನಂತ ಎಂಬ ಬಹುದೊಡ್ಡ ಕ್ಯಾಂಪಸ್ ನಮ್ಮ ಬೆಂಗಳೂರಿನಲ್ಲಿದೆ. ನಾವು ಚರ್ಚೆಗೆ ಬರಲು ಸಿದ್ಧರಿದ್ದೇವೆ, ಆದರೆ ಇವರು ಚರ್ಚೆಗೆ ಬರಲ್ಲ ಎಂದು ಖರ್ಗೆ ಬಿಜೆಪಿಗೆ ತಿರುಗೇಟು ನೀಡಿದರು.

error: Content is protected !!