ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಲೇಗಾಂವ್ ಸ್ಫೋಟ ಪ್ರಕರಣದಿಂದ ಮುಕ್ತರಾದ ಸಮೀರ್ ಕುಲಕರ್ಣಿ ಮತ್ತು ಮೇಜರ್ ರಮೇಶ್ ಉಪಾಧ್ಯಾಯ ಅವರು ಅಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ನೇತೃತ್ವದ ಆಡಳಿತವು ರಾಜಕೀಯ ಲಾಭಕ್ಕಾಗಿ ಮತ್ತು “ಕೇಸರಿ ಭಯೋತ್ಪಾದನೆ”ಯ ಸುಳ್ಳು ಪ್ರಚಾರಕ್ಕಾಗಿ ಹಿಂದು ನಿಷ್ಠರನ್ನು ವ್ಯವಸ್ಥಿತವಾಗಿ ಸಿಲುಕಿಸಲು ದೊಡ್ಡ ಷಡ್ಯಂತ್ರ ಹೆಣೆದಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹಿಂದು ಜನಜಾಗೃತಿ ಸಮಿತಿ ವತಿಯಿಂದ ಕೊಲ್ಹಾಪುರದ ದೇವಲ ಕ್ಲಬ್‌ನಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಈ ಧ್ವನಿಗಳು ಕೇಳಿಬಂದವು. ಸಮಾರಂಭದಲ್ಲಿ ಧರ್ಮವೀರ ಸಮೀರ್ ಕುಲಕರ್ಣಿ ಮತ್ತು ಭಾರತೀಯ ಸೇನೆಯ ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.
ಮಾಲೇಗಾಂವ್ ಪ್ರಕರಣದಲ್ಲಿ ನಿರ್ದೋಷಿ ಎಂದು ಸಾಬೀತಾದ ಸಮೀರ್ ಕುಲಕರ್ಣಿ ಅವರು, “ಕಾಂಗ್ರೆಸ್ ಸರ್ಕಾರವು ದೊಡ್ಡ ಷಡ್ಯಂತ್ರ ಹೆಣೆದಿದ್ದು, ಇದರಿಂದಲೇ ಈ ಕೇಸ್‌ನಲ್ಲಿ ನಮ್ಮನ್ನು ಸಿಲುಕಿಸಲಾಯಿತು” ಎಂದು ಹೇಳಿದರು.
ಇದೇ ವೇಳೆ, ಮತ್ತೊಬ್ಬ ನಿರ್ದೋಷಿ ಮೇಜರ್ ರಮೇಶ್ ಉಪಾಧ್ಯಾಯ ಅವರು, ಘಟನೆ ನಡೆದ ದಿನ ತಾನು ಮುಂಬೈಯಲ್ಲಿದ್ದರೂ ನನ್ನನ್ನು ಬಂಧಿಸಿ ಥಳಿಸಲಾಯಿತು. ಅಲ್ಲದೆ, ಡಾ. ಮೋಹನ್ ಭಾಗವತ್, ಪ್ರವೀಣ್ ತೊಗಾಡಿಯಾ, ಶ್ರೀ ಶ್ರೀ ರವಿಶಂಕರ್, ಯೋಗಿ ಆದಿತ್ಯನಾಥ್ ಅವರಂತಹ ಗಣ್ಯರ ಹೆಸರುಗಳನ್ನು ತೆಗೆದುಕೊಳ್ಳಲು ನನ್ನ ಮೇಲೆ ಒತ್ತಡ ಹೇರಲಾಯಿತು. “ಕೇವಲ ರಾಜಕೀಯ ಲಾಭಕ್ಕಾಗಿ ನಮ್ಮ ಸಾಮಾಜಿಕ ಮತ್ತು ಆರ್ಥಿಕ ಜೀವನವನ್ನು ಹಾಳು ಮಾಡಿದರು,” ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕೇಸರಿ ಭಯೋತ್ಪಾದನೆ’ ಸುಳ್ಳು ಪ್ರಚಾರದ ವಿರುದ್ಧ ಹೋರಾಟ
ಲೇಖಕ ವಿಕ್ರಮ ಭಾವೆ ಅವರು ಡಾ. ನರೇಂದ್ರ ದಾಭೋಲ್ಕರ್ ಪ್ರಕರಣವನ್ನು ಉಲ್ಲೇಖಿಸಿ, “ಸಂಬಂಧವೇ ಇಲ್ಲದಿದ್ದರೂ ನನ್ನನ್ನು ಮತ್ತು ವಕೀಲ ಸಂಜೀವ ಪುನಾಳೇಕರನ್ನು ಬಂಧಿಸಿದರು. ಹತ್ಯೆಯ 15 ನಿಮಿಷಗಳಲ್ಲೇ ಅಂದಿನ ಸಿಎಂ ಪೃಥ್ವಿರಾಜ್ ಚವಾಣ್ ಅವರು, ‘ಇದನ್ನು ಗೋಡ್ಸೆವಾದಿಗಳು ಮಾಡಿದ್ದಾರೆ’ ಎಂದು ಹೇಳಿದ್ದು, ಪ್ರಗತಿಪರರ ಆರೋಪಗಳು ಎಷ್ಟು ಸುಳ್ಳು ಮತ್ತು ಯೋಜಿತವಾಗಿರುತ್ತವೆ ಎಂಬುದನ್ನು ತೋರಿಸುತ್ತದೆ. ದಬ್ಬಾಳಿಕೆಯಿಂದ ಹಿಂಸೆ ನೀಡಬಹುದು, ಆದರೆ ನಾವು ಹಿಂದುತ್ವದ ಕಾರ್ಯವನ್ನು ಬಿಡಲ್ಲ,” ಎಂದು ಪ್ರತಿಪಾದಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಡ ರಾಜ್ಯ ಸಂಘಟಕ ಸುನೀಲ್ ಘನವಟ್ ಅವರು, “ಕಾಂಗ್ರೆಸ್‌ನಂತಹ ಜಾತ್ಯತೀತ ಆಡಳಿತಗಾರರು ಸಾಮ್ಯವಾದಿ ಮತ್ತು ಜಿಹಾದಿ ಶಕ್ತಿಗಳೊಂದಿಗೆ ಸೇರಿ ‘ಕೇಸರಿ ಭಯೋತ್ಪಾದನೆ’ ಇದೆ ಎಂದು ವ್ಯವಸ್ಥಿತವಾಗಿ ಅಪಪ್ರಚಾರ ಮಾಡಿದರು. ಮಾಲೇಗಾಂವ್, ಸಮಝೌತಾ, ಮಡಗಾಂವ್ ಸ್ಫೋಟಗಳು ಮತ್ತು ದಾಭೋಲ್ಕರ್-ಪಾನ್ಸರೆ ಹತ್ಯೆಯಂತಹ ಅನೇಕ ಪ್ರಕರಣಗಳಲ್ಲಿ ನಿರಪರಾಧಿ ಹಿಂದೂ ನಿಷ್ಠರನ್ನು ಸಿಲುಕಿಸಲಾಗಿದೆ. ಈ ಷಡ್ಯಂತ್ರಕ್ಕೆ ಬಲಿಯಾದವರ ಬೆನ್ನಿಗೆ ನಿಲ್ಲುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ,” ಎಂದು ಕರೆ ನೀಡಿದರು.
ಹಿಂದೂ ವಿಧಿಜ್ಞ ಪರಿಷತ್ತಿನ ಅಧ್ಯಕ್ಷ ವಕೀಲ ವೀರೇಂದ್ರ ಇಚಲಕರಂಜಿಕರ್ ಅವರು, “ದಾಭೋಲ್ಕರ್, ಪಾನ್ಸರೆ, ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆಗಳ ಬಗ್ಗೆ ಅಳುತ್ತಾರೆ, ಆದರೆ ಸಾಮ್ಯವಾದಿಗಳು ದೇಶದಲ್ಲಿ 14 ಸಾವಿರಕ್ಕೂ ಹೆಚ್ಚು ಹತ್ಯೆಗಳನ್ನು ಮಾಡಿದ್ದಾರೆ. ಇದರ ಬಗ್ಗೆ ಯಾರೂ ಮಾತಾಡಲ್ಲ. ಹಿಂದೂಗಳ ವಿರುದ್ಧ ನಡೆಯುತ್ತಿರುವ ಇಕೋಸಿಸ್ಟಂ ವಿರುದ್ಧ ನಾವು ಹೋರಾಡಬೇಕು,” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಕೀಲರಾದ ಸಮೀರ್ ಪಟವರ್ಧನ್, ಪ್ರೀತಿ ಪಾಟೀಲ್ ಮತ್ತು ಲೇಖಕ ವಿಕ್ರಮ ಭಾವೆ ಅವರಿಗೂ ಸನ್ಮಾನ ಮಾಡಲಾಯಿತು.

