January18, 2026
Sunday, January 18, 2026
spot_img

ಐಪಿಎಲ್ ಮೆಗಾ ರಿಲೀಸ್ ಅಲರ್ಟ್: ಪಂತ್, ರಶೀದ್, ಪತಿರಣಗೆ ಕೋಕ್? ಫ್ರಾಂಚೈಸಿಗಳ ಬಿಗ್ ಗೇಮ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ ಕೇವಲ ಕ್ರಿಕೆಟ್ ಟೂರ್ನಿ ಅಲ್ಲ, ಇದು ಬಿಸಿನೆಸ್‌ಮೆನ್‌ಗಳ ಪಾಲಿಗೆ ಅದೃಷ್ಟದ ಟೂರ್ನಿ, ಹಣ ಕೊಳ್ಳೆ ಹೊಡೆಯೋ ಅವಕಾಶ. ಇಲ್ಲಿ ಸೂಪರ್‌ಸ್ಟಾರ್‌ಗಿಂತ ಪರ್ಫಾಮೆನ್ಸ್ ಮಾಡುವ ಆಟಗಾರನಿಗೇ ಹೆಚ್ಚು ಬೆಲೆ. ಹೀರೋ ಝೀರೋ ಆಗಬಹುದು, ಝೀರೋ ಹೀರೋ ಕೂಡ ಆಗಬಹುದು. ಈ ಮಾತು ಏಕೆ ಗೊತ್ತಾ? ಮುಂಬರುವ ಐಪಿಎಲ್ ಸೀಸನ್‌ಗೂ ಮುನ್ನ ನಡೆದ ಕೆಲವು ಬೆಳವಣಿಗೆಗಳು ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿವೆ.

ಐಪಿಎಲ್ ಸೀಸನ್-19ಕ್ಕೆ ಕೆಲವೇ ತಿಂಗಳು ಬಾಕಿ ಉಳಿದಿದ್ದು, ಫ್ರಾಂಚೈಸಿಗಳು ಭರ್ಜರಿ ಸಿದ್ಧತೆ ನಡೆಸಿವೆ. ಆಟಗಾರರ ಟ್ರೇಡಿಂಗ್ ಜೋರಾಗಿದ್ದು, ಹರಾಜಿನ ದಿನಾಂಕ ಸಮೀಪಿಸುತ್ತಿದ್ದಂತೆ ಮಾಲೀಕರು ತೆರೆಮರೆಯಲ್ಲಿ ಬಲಿಷ್ಠ ತಂಡ ಕಟ್ಟಲು ಹೋಂವರ್ಕ್ ಮಾಡುತ್ತಿದ್ದಾರೆ. ಈ ನಡುವೆ ಕೆಲವು ಶಾಕಿಂಗ್ ರಿಲೀಸ್ ಸುದ್ದಿಗಳು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿವೆ.

ಲಕ್ನೋ ನಾಯಕ ರಿಷಭ್ ಪಂತ್ ಹರಾಜಿಗೆ? ಒತ್ತಡದಿಂದ ಹೊರಬರಲು ‘ಪಥ’ ಬದಲಾವಣೆ!
ಲಕ್ನೋ ಸೂಪರ್‌ಜೈಂಟ್ಸ್ (LSG) ತಂಡದ ನಾಯಕ ರಿಷಭ್ ಪಂತ್ ಮತ್ತೆ ಹರಾಜಿಗೆ ಹೋಗುವ ಸಾಧ್ಯತೆಯ ಬಗ್ಗೆ ಕ್ರಿಕೆಟ್ ವಲಯದಲ್ಲಿ ಚರ್ಚೆ ಶುರುವಾಗಿದೆ. ಎಲ್‌ಎಸ್‌ಜಿ ಮಾಲೀಕರ ಅತಿಯಾದ ಒತ್ತಡವು ಪಂತ್ ಅವರ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ಪಂತ್ ಹೊಸ ಫ್ರಾಂಚೈಸಿಯ ಹುಡುಕಾಟದಲ್ಲಿದ್ದಾರೆ ಎಂಬ ಮಾತು ಕೇಳಿಬಂದಿದೆ.

ರಶೀದ್ ಖಾನ್ ದುಬಾರಿ ಬೌಲರ್: ಟೈಟನ್ಸ್ ಕೈಬಿಡುತ್ತಾ?
ಗುಜರಾತ್ ಟೈಟನ್ಸ್ (GT) ತಂಡಕ್ಕೆ ಆರಂಭದಲ್ಲಿ ಯಶಸ್ಸು ತಂದಿದ್ದ ರಶೀದ್ ಖಾನ್, ಕಳೆದ ಎರಡು ವರ್ಷಗಳಲ್ಲಿ ತಂಡದಲ್ಲಿ ಇದ್ದೂ ಇಲ್ಲದಂತಾಗಿದ್ದಾರೆ. ಕಳಪೆ ಫಾರ್ಮ್‌ನಿಂದಾಗಿ ರಶೀದ್ ಸಿಕ್ಕಾಪಟ್ಟೆ ಎಕ್ಸ್‌ಪೆನ್ಸಿವ್ ಬೌಲರ್ ಎನಿಸಿಕೊಂಡಿದ್ದಾರೆ. ಮುಂಬರುವ ಸೀಸನ್‌ಗೂ ಮುನ್ನ ಟೈಟನ್ಸ್ ರಶೀದ್‌ರನ್ನು ರಿಲೀಸ್ ಮಾಡಿದರೂ ಆಶ್ಚರ್ಯವಿಲ್ಲ.

ಇಂಜುರಿ ಮತ್ತು ದುಬಾರಿ ಪ್ರದರ್ಶನ: ಪತಿರಣ ಮೇಲಿನ ವಿಶ್ವಾಸ ಕಳೆದುಕೊಂಡ ಸಿಎಸ್‌ಕೆ?
ಒಂದೆಡೆ ಸಾಧಾರಣ ಪ್ರದರ್ಶನ, ಮತ್ತೊಂದೆಡೆ ಇಂಜುರಿ ಸಮಸ್ಯೆ – ಇದು ಸಿಎಸ್‌ಕೆ ವೇಗಿ ಮಥೀಶ ಪತಿರಣ ಅವರನ್ನು ಕಾಡಿದೆ. ಪತಿರಣ ಮೇಲೆ ಇಟ್ಟಿದ್ದ ಅತಿಯಾದ ನಂಬಿಕೆ ಫ್ರಾಂಚೈಸಿಗೆ ಮುಳುವಾಗಿದ್ದು, ಏಷ್ಯಾಕಪ್‌ನಲ್ಲೂ ಲಂಕಾ ತಂಡದಲ್ಲಿ ಕಾಣಿಸಿಕೊಳ್ಳದ ಕಾರಣ, ಚೆನ್ನೈ ಫ್ರಾಂಚೈಸಿ ಈ ಯುವ ವೇಗಿಯನ್ನು ಬಿಟ್ಟು ಮುಂದೆ ಸಾಗಲು ನಿರ್ಧರಿಸಿದೆ ಎನ್ನಲಾಗಿದೆ.

ಫ್ರಾಂಚೈಸಿ ಮಾಲೀಕರು ಕೋರ್ ತಂಡವನ್ನು ಉಳಿಸಿಕೊಳ್ಳಲು ಮುಂದಾಗಿರುವುದು ನಿಜವಾದರೂ, ಕೆಲ ಸೂಪರ್‌ಸ್ಟಾರ್ ಆಟಗಾರರನ್ನು ತಂಡದಿಂದ ರಿಲೀಸ್ ಮಾಡಲು ಮುಂದಾಗಿರುವುದು ಐಪಿಎಲ್‌ನ ವೃತ್ತಿಪರ ಹಾಗೂ ವ್ಯಾಪಾರ ಮನಸ್ಥಿತಿಯನ್ನು ತೋರಿಸುತ್ತದೆ. ಪ್ರದರ್ಶನವೇ ಅಂತಿಮ ನಿರ್ಧಾರವಾಗಿದ್ದು, ಹರಾಜಿಗೂ ಮುನ್ನ ಯಾರು ರಿಲೀಸ್ ಆಗಲಿದ್ದಾರೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

Must Read

error: Content is protected !!