Thursday, November 6, 2025

ನಾಡಬಾಂಬ್ ಸ್ಫೋಟ: ಕಾಡು ಪ್ರಾಣಿಗಳಿಗಿಟ್ಟ ಉರುಳಿನಿಂದ ಮನೆ ಛಿದ್ರ!

ಹೊಸದಿಗಂತ ಹಾವೇರಿ:

ಅಕ್ರಮವಾಗಿ ಮನೆಯೊಳಗೆ ಸಂಗ್ರಹಿಸಿಡಲಾಗಿದ್ದ ನಾಡಬಾಂಬ್ ಸ್ಫೋಟಗೊಂಡು ಇಡೀ ಮನೆಯೇ ಸಂಪೂರ್ಣವಾಗಿ ನಾಶವಾಗಿರುವ ಆಘಾತಕಾರಿ ಘಟನೆ ಹಾನಗಲ್ಲ ತಾಲೂಕಿನ ಹೀರೆಬಾಸೂರು ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಸ್ಫೋಟದ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಜೀವಹಾನಿ ಸಂಭವಿಸಿಲ್ಲ.

ಏನಿದು ಘಟನೆ?

ಹೀರೆಬಾಸೂರು ಗ್ರಾಮದ ನಿವಾಸಿ ಶಶಿಧರ್ ಎಂಬುವರ ಮನೆಯಲ್ಲಿ ಈ ಭೀಕರ ಸ್ಫೋಟ ಸಂಭವಿಸಿದೆ. ಕಾಡು ಪ್ರಾಣಿಗಳನ್ನು ಬೇಟೆಯಾಡಲು ಈ ನಾಡಬಾಂಬ್‌ಗಳನ್ನು ತಯಾರಿಸಿ, ಮನೆಯ ಸಜ್ದಾದ ಮೇಲೆ ಸಂಗ್ರಹಿಸಿ ಇಡಲಾಗಿತ್ತು ಎನ್ನಲಾಗಿದೆ. ಏಕಾಏಕಿ ಸಂಭವಿಸಿದ ಈ ಸ್ಫೋಟದ ತೀವ್ರತೆಗೆ ಮನೆಯ ಗೋಡೆಗಳು, ಚಾವಣಿ ಸೇರಿದಂತೆ ಸಂಪೂರ್ಣ ಕಟ್ಟಡವೇ ಛಿದ್ರ ಛಿದ್ರವಾಗಿದೆ.

ಅಕ್ರಮವಾಗಿ ನಾಡಬಾಂಬ್ ಸಂಗ್ರಹಿಸಿಟ್ಟಿದ್ದ ಶಂಕೆಯ ಮೇಲೆ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳನ್ನು ಶಶಿಕುಮಾರ್ ಮತ್ತು ಕುಮಾರ್ ಎಂದು ಗುರುತಿಸಲಾಗಿದೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಬಾಂಬ್ ನಿಷ್ಕ್ರಿಯ ದಳದ ತಂಡ ಸ್ಥಳಕ್ಕೆ ದೌಡಾಯಿಸಿ, ಸ್ಫೋಟಗೊಂಡ ಮನೆಯ ಪರಿಶೀಲನೆ ನಡೆಸಿದೆ. ಈ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಕ್ರಮ ಬಾಂಬ್ ತಯಾರಿಕೆ ಮತ್ತು ಸಂಗ್ರಹದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

error: Content is protected !!