March 11, 2026
Wednesday, March 11, 2026
spot_img

ಕುನೋ ಉದ್ಯಾನವನಕ್ಕೆ 9 ಹೊಸ ಗೆಸ್ಟ್: ದೇಶದಲ್ಲಿ ಚೀತಾಗಳ ಸಂಖ್ಯೆ 48ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಫ್ರಿಕಾದ ಬೋಟ್ಸ್ವಾನಾದಿಂದ ತರಲಾದ ಒಂಬತ್ತು ಚೀತಾಗಳು ಶನಿವಾರ ಮಧ್ಯ ಪ್ರದೇಶದ ಕುನೋ ಉದ್ಯಾನಕ್ಕೆ ಸುರಕ್ಷಿತವಾಗಿ ಸೇರಿವೆ. ಈ ಹೊಸ ಸೇರ್ಪಡೆಯೊಂದಿಗೆ ದೇಶದಲ್ಲಿರುವ ಚೀತಾಗಳ ಸಂಖ್ಯೆ 48ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಲ್ಕು ವರ್ಷಗಳ ಚೀತಾ ಪುನರುಜ್ಜೀವನ ಯೋಜನೆಯ ಭಾಗವಾಗಿ ಇದು ಮೂರನೇ ಹಂತದ ಸ್ಥಳಾಂತರವಾಗಿದೆ. ಭಾರತೀಯ ವಾಯುಪಡೆಯ ವಿಶೇಷ ವಿಮಾನದಲ್ಲಿ ಗ್ವಾಲಿಯರ್‌ಗೆ ತರಲಾದ ಪ್ರಾಣಿಗಳನ್ನು ನಂತರ ಹೆಲಿಕಾಪ್ಟರ್ ಮೂಲಕ ಕುನೋ ಉದ್ಯಾನಕ್ಕೆ ಸಾಗಿಸಲಾಯಿತು. ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಚೀತಾಗಳನ್ನು ವಿಶೇಷವಾಗಿ ಸಿದ್ಧಪಡಿಸಿದ ಆವರಣಗಳಿಗೆ ಬಿಡುಗಡೆ ಮಾಡಿದರು.

ಇದನ್ನೂ ಓದಿ:

ಇದಕ್ಕೂ ಮೊದಲು ನಮೀಬಿಯಾ ಹಾಗೂ ಸೌತ್ ಆಫ್ರಿಕಾದಿಂದ ಚೀತಾಗಳನ್ನು ಭಾರತಕ್ಕೆ ತರಲಾಗಿತ್ತು. ಪ್ರಾಜೆಕ್ಟ್ ಚೀತಾ ನಿರ್ದೇಶಕರ ಪ್ರಕಾರ, ಇವುಗಳ ಸಂಖ್ಯೆಯನ್ನು ಶೀಘ್ರದಲ್ಲೇ 50ಕ್ಕೆ ಹೆಚ್ಚಿಸುವುದು ಸರ್ಕಾರದ ಗುರಿಯಾಗಿದೆ. ಕೆಲವು ಚೀತಾಗಳನ್ನು ಗಾಂಧಿ ಸಾಗರ್ ವನ್ಯಜೀವಿ ಅಭಯಾರಣ್ಯಕ್ಕೂ ಸ್ಥಳಾಂತರಿಸಲಾಗಿದೆ.

2023ರಿಂದ ಕುನೋ ಉದ್ಯಾನದಲ್ಲಿ ಒಟ್ಟು 39 ಮರಿಗಳು ಜನಿಸಿದ್ದು, ಅವುಗಳಲ್ಲಿ 27 ಬದುಕುಳಿದಿವೆ. ವಿಶ್ವದ ಅತಿ ವೇಗದ ಭೂಪ್ರಾಣಿಯಾದ ಚೀತಾ ಸುಮಾರು ಏಳು ದಶಕಗಳ ಬಳಿಕ ಭಾರತದಲ್ಲಿ ಪುನಃ ವಾಸಿಸುತ್ತಿರುವುದು ಸಂರಕ್ಷಣಾ ಪ್ರಯತ್ನಗಳಿಗೆ ಮಹತ್ವದ ಹಂತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !