Sunday, November 9, 2025

ಯೆಮೆನ್​​ನಲ್ಲಿ ಎಲ್ಲಿವರೆಗೆ ತಲುಪಿತು ನರ್ಸ್​ ನಿಮಿಷಾ ಗಲ್ಲು ಶಿಕ್ಷೆ ವಿಚಾರಣೆ?: ಸುಪ್ರೀಂ ಕೋರ್ಟ್‌ ಗೆ ಮಾಹಿತಿ ಕೊಟ್ಟ ಕೇಂದ್ರ ಸರಕಾರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಯೆಮೆನ್​​ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಭಾರತೀಯ ನರ್ಸ್​ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ. ಪ್ರಕರಣದಲ್ಲಿ ಯಾವುದೇ ಅಹಿತಕರ ವಿದ್ಯಮಾನಗಳು ನಡೆಯುತ್ತಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್​ಗೆ ಗುರುವಾರ ತಿಳಿಸಿದೆ.

ನಿಮಿಷಾ ಪ್ರಿಯಾ ಅವರನ್ನು ಯೆಮೆನ್​​ನಿಂದ ವಾಪಸ್​ ಕರೆತರುವ ಕುರಿತ ಅರ್ಜಿಯ ವಿಚಾರಣೆಯ ವೇಳೆ, ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು, ಭಾರತೀಯ ನರ್ಸ್​​ ಮರಣದಂಡನೆ ಪ್ರಕರಣ ಎಲ್ಲಿಗೆ ಬಂದಿದೆ ಎಂದು ಪ್ರಶ್ನಿಸಿತು.

ಇದಕ್ಕೆ ಕೇಂದ್ರದ ಪರವಾಗಿ ಪ್ರತಿಕ್ರಿಯಿಸಿದ, ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು, ಗಲ್ಲು ಶಿಕ್ಷೆಯನ್ನು ನಿಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಗತಿ ಕಾಣುತ್ತಿಲ್ಲ. ಬಿಡಿಸುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಹೊಸ ಮಧ್ಯವರ್ತಿಯೊಬ್ಬರ ಇದರಲ್ಲಿ ಮಧ್ಯಪ್ರವೇಶಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರಿಯಾಗೆ ಕಾನೂನು ಬೆಂಬಲ ನೀಡುತ್ತಿರುವ ಸಂಘಟನೆಯಾದ ‘ಸೇವ್ ನಿಮಿಷಾ ಪ್ರಿಯಾ ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್’ ಪರ ಹಾಜರಾದ ವಕೀಲರು, ಕೂಡ ಮರಣದಂಡನೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ. ಪ್ರಕರಣದಲ್ಲಿ ಉತ್ತಮ ಸಂಗತಿ ಎಂದರೆ, ನಿಮಿಷಾ ಅವರ ವಿರುದ್ಧವಾಗಿ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ತಿಳಿಸಿದರು.

ಈ ಹಿಂದೆ ಭಾರತೀಯ ಗ್ರ್ಯಾಂಡ್ ಮುಫ್ತಿ ಅವರಿಂದ ನಿಮಿಷಾ ಅವರನ್ನು ಬಿಡುಗಡೆ ಮಾಡುವ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಇದೀಗ, ಮತ್ತೊಬ್ಬರು ಅಲ್ಲಿನ ಆಡಳಿತದೊಂದಿಗೆ ಮಾತುಕತೆ ಮಾಡುತ್ತಿದ್ದಾರೆ. ಅರ್ಜಿಯನ್ನು ಸದ್ಯದ ಮಟ್ಟಿಗೆ ಮುಂದೂಡಬಹುದು ಎಂದು ವಕೀಲರು ತಿಳಿಸಿದರು. ಬಳಿಕ ಪೀಠವು, ಜನವರಿ 2026 ರಲ್ಲಿ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಿ. ಅಗತ್ಯಬಿದ್ದರೆ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಶೀಲಿಸಿ ಎಂದಿತು.

error: Content is protected !!