ಯುದ್ಧ ಭೂಮಿಯಲ್ಲಿ ವಾಯುಪಡೆಯ ಶಕ್ತಿಯು ನಿರ್ಣಾಯಕ ಪಾತ್ರ ವಹಿಸುತ್ತದೆ. ಗಾಳಿಯಲ್ಲಿ ಯಾರು ಮೇಲುಗೈ ಸಾಧಿಸುತ್ತಾರೋ, ಯುದ್ಧವು ಅವರ ಪರ ವಾಲುತ್ತದೆ ಎಂಬ ಮಾತಿದೆ. ಈ ನಿಟ್ಟಿನಲ್ಲಿ, ಯಾವುದೇ ದೇಶದ ಮಿಲಿಟರಿ ಶಕ್ತಿಯಲ್ಲಿ ಅದರ ವಾಯು ಸಾಮರ್ಥ್ಯವು ಅತಿ ಮುಖ್ಯ. ವಿಶ್ವದ ಅತ್ಯಂತ ಪ್ರಬಲ ಸೇನಾಶಕ್ತಿ ಎಂಬ ಹೆಗ್ಗಳಿಕೆ ಅಮೆರಿಕಕ್ಕಿದೆ. ಆದರೆ, ಇತ್ತೀಚಿನ ಒಂದು ವರದಿ ಭಾರತದ ವಾಯುಪಡೆಗೆ ಸಂಬಂಧಿಸಿದಂತೆ ಅಚ್ಚರಿಯ ಅಂಶಗಳನ್ನು ಹೊರಹಾಕಿದೆ.
ಅಮೆರಿಕ ಟಾಪ್, ಭಾರತಕ್ಕೆ 3ನೇ ಸ್ಥಾನ
ವರ್ಲ್ಡ್ ಡೈರೆಕ್ಟರಿ ಆಫ್ ಮಾಡರ್ನ್ ಮಿಲಿಟರಿ ಏರ್‌ಕ್ರಾಫ್ಟ್ (WDMMA) ಬಿಡುಗಡೆ ಮಾಡಿದ ವಿಶ್ವ ಶ್ರೇಯಾಂಕದ ಪ್ರಕಾರ, ಅತೀ ಬಲಿಷ್ಠ ವಾಯುಶಕ್ತಿಯ ದೇಶಗಳ ಪಟ್ಟಿಯಲ್ಲಿ ನಿರೀಕ್ಷೆಯಂತೆ ಅಮೆರಿಕ ಮತ್ತು ರಷ್ಯಾ ಮೊದಲ ಎರಡು ಸ್ಥಾನಗಳಲ್ಲಿವೆ. ಆದರೆ, ಆಶ್ಚರ್ಯಕರ ಬೆಳವಣಿಗೆ ಎಂದರೆ, ಭಾರತವು ನಾಲ್ಕನೇ ಸ್ಥಾನದಲ್ಲಿರುವ ಚೀನಾವನ್ನು ಹಿಂದಿಕ್ಕಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ!
ವರದಿಯ ಪ್ರಕಾರ, ರಷ್ಯಾ, ಚೀನಾ, ಭಾರತ, ಸೌತ್ ಕೊರಿಯಾ, ಮತ್ತು ಜಪಾನ್ ದೇಶಗಳ ವಾಯುಶಕ್ತಿಯನ್ನು ಒಟ್ಟು ಸೇರಿಸಿದರೂ ಅದು ಅಮೆರಿಕದ ಶಕ್ತಿಗೆ ಸಮವಾಗದು ಎಂದು ಅಭಿಪ್ರಾಯ ಪಡಲಾಗಿದೆ. ಇದಕ್ಕೆ ಮುಖ್ಯ ಕಾರಣ, ಅಮೆರಿಕವು ಮಿಲಿಟರಿ ಶಕ್ತಿಯ ಅಭಿವೃದ್ಧಿಗಾಗಿ ಜಾಗತಿಕವಾಗಿ ಅತಿ ಹೆಚ್ಚು ಅಂದರೆ ಸುಮಾರು ಶೇ. 40ರಷ್ಟು ಬಂಡವಾಳ ಹೂಡುವುದು.
ಭಾರತ ಚೀನಾವನ್ನು ಹಿಂದಿಕ್ಕಿದ್ದು ಹೇಗೆ?
WDMMA ತನ್ನ ಅಧ್ಯಯನದಲ್ಲಿ ವಿಶ್ವದ 103 ದೇಶಗಳನ್ನು ಪರಿಗಣಿಸಿ, ಭೂಸೇನೆ, ವಾಯುಸೇನೆ, ಮತ್ತು ನೌಕಾ ಸೇನೆಗಳಲ್ಲಿ ಇರುವ ಒಟ್ಟು 48,082 ಯುದ್ಧವಿಮಾನಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿದೆ. TruVal ರೇಟಿಂಗ್ ಸಿಸ್ಟಮ್ ಮೂಲಕ ವಾಯುಶಕ್ತಿಗಳನ್ನು ಅಳೆಯಲಾಗಿದೆ.
TVR ರೇಟಿಂಗ್‌ನಲ್ಲಿ ಚೀನಾದ ಏರ್ ಫೋರ್ಸ್ 63.8 ಅಂಕ ಪಡೆದರೆ, ಭಾರತದ ವಾಯುಪಡೆ 69.4 ಅಂಕ ಗಳಿಸಿದೆ.
ಇಲ್ಲಿರುವ ಒಂದು ಗೊಂದಲವೆಂದರೆ, ಚೀನಾ ಸುಮಾರು 4,000 ಯುನಿಟ್‌ಗಳಷ್ಟು ಯುದ್ಧವಿಮಾನಗಳನ್ನು ಹೊಂದಿದ್ದರೆ, ಭಾರತವು ಅದರ ಅರ್ಧದಷ್ಟು ವಿಮಾನಗಳನ್ನು ಮಾತ್ರ ಹೊಂದಿದೆ. ಕಡಿಮೆ ವಿಮಾನಗಳಿದ್ದರೂ ಭಾರತ ಹೇಗೆ ಮೇಲುಗೈ ಸಾಧಿಸಿತು?
ವರದಿಯ ವಿಶ್ಲೇಷಣೆಯು ಈ ಅಂಶವನ್ನು ಸ್ಪಷ್ಟಪಡಿಸುತ್ತದೆ:
ಸಮತೋಲಿತ ಶಕ್ತಿ: ಚೀನಾ ಬಳಿ ಹೆಚ್ಚಿನ ಯುನಿಟ್‌ಗಳಿದ್ದರೂ, ಭಾರತದ ಬಳಿ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು ಮತ್ತು ತರಬೇತಿ ವಿಮಾನಗಳ ಉತ್ತಮ ಸಮತೋಲನವಿದೆ. ಭಾರತದ ವಾಯುಪಡೆಯ ವಿಮಾನಗಳಲ್ಲಿ ಶೇ. 31.6 ಫೈಟರ್ ಜೆಟ್‌ಗಳು, ಶೇ. 29 ಹೆಲಿಕಾಪ್ಟರ್‌ಗಳು ಮತ್ತು ಶೇ. 21.8 ತರಬೇತಿ ವಿಮಾನಗಳಿವೆ.
ಯುದ್ಧಕ್ಕೆ ಸನ್ನದ್ಧ ಸ್ಥಿತಿ: WDMMA ಪ್ರಕಾರ, ಯುದ್ಧಕ್ಕೆ ಸನ್ನದ್ಧವಾಗಿರುವ ಸ್ಥಿತಿಯಲ್ಲಿ ಭಾರತವು ಚೀನಾಕ್ಕಿಂತ ಉತ್ತಮವಾಗಿದೆ. ತರಬೇತಿ, ಕ್ಲೋಸ್ ಏರ್ ಸಪೋರ್ಟ್, ಮತ್ತು ವಿಶೇಷ ಬಾಂಬರ್ ಯುನಿಟ್‌ಗಳ ವಿಷಯದಲ್ಲಿ ಭಾರತವು ಹೆಚ್ಚು ಪ್ರಬುದ್ಧತೆ ಹೊಂದಿದೆ.
TVR ಶಕ್ತಿ: ಒಟ್ಟಾರೆ ವಾಯುಶಕ್ತಿಯ TVR ಅಂಕಗಳಲ್ಲಿ ಚೀನಾದದ್ದು 144 ಇದ್ದರೆ, ಭಾರತದ್ದು 140.6 ಇದೆ. ಆದರೆ, ಕಾರ್ಯಾಚರಣೆಯ ಪ್ರಬುದ್ಧತೆ ಮತ್ತು ಗುಣಮಟ್ಟದ ಆಧಾರದ ಮೇಲೆ ಭಾರತಕ್ಕೆ ಉತ್ತಮ ರೇಟಿಂಗ್ ದೊರೆತಿದೆ. ಪಾಕಿಸ್ತಾನದ ವಿರುದ್ಧದ ಆಪರೇಷನ್ ಸಿಂಧೂರದಲ್ಲಿ ಭಾರತದ ವಾಯುಶಕ್ತಿಯ ಪ್ರಬುದ್ಧತೆ ಜಗತ್ತಿಗೆಲ್ಲಾ ಸಾಬೀತಾಗಿದೆ.