ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದ ಮಲ್ಲತಹಳ್ಳಿಯ ಕಲಾಗ್ರಾಮದಲ್ಲಿ ನಡೆದ ʻಕನಕ ಕಾವ್ಯ ದೀವಿಗೆ ಕನ್ನಡ ನಾಡ ನುಡಿ ಉತ್ಸವʼ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಾಸಕ ಮುನಿರತ್ನ ಅವರು ಒಂದೇ ವೇದಿಕೆಯನ್ನು ಹಂಚಿಕೊಂಡು ರಾಜಕೀಯ ಆಪ್ತತೆಯನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ಆರಂಭದಲ್ಲೇ ಮುಖ್ಯಮಂತ್ರಿಗಳು ಆಗಮಿಸಿದಾಗ ಶಾಸಕ ಮುನಿರತ್ನ ಅವರು ಕಾಲಿಗೆ ಬಿದ್ದು ಅವರ ಆಶೀರ್ವಾದ ಪಡೆದ ದೃಶ್ಯ ಎಲ್ಲರ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಶಾಸಕ ಮುನಿರತ್ನ ಅವರು ಸಿದ್ದರಾಮಯ್ಯ ಅವರೊಂದಿಗೆ ಆತ್ಮೀಯ ಮಾತುಕತೆ ನಡೆಸಿದರು. ತಮ್ಮ ಭಾಷಣದ ಪ್ರಾರಂಭದಲ್ಲಿ ಸಿಎಂ ಅವರನ್ನು ʻನೆಚ್ಚಿನ ಸಿಎಂ ಸಿದ್ದರಾಮಯ್ಯʼ ಎಂದು ಸಂಬೋಧಿಸಿದ ಅವರು, “ಅಣ್ಣನ ನೋಡಬೇಕು ಎಂದು ಬೆಳಗ್ಗೆ 5 ಗಂಟೆಗೆ ಬಂದಿದ್ದೆ,” ಎಂದು ಹೇಳುವ ಮೂಲಕ ತಮ್ಮ ವೈಯಕ್ತಿಕ ಬಾಂಧವ್ಯವನ್ನು ಒತ್ತಿ ಹೇಳಿದರು.
ಮುಂದುವರೆದು ಮಾತನಾಡಿದ ಮುನಿರತ್ನ ಅವರು, ಮುಖ್ಯಮಂತ್ರಿಗಳನ್ನು ಜ್ಯೋತಿಗೆ ಹೋಲಿಸಿ, “ಜ್ಯೋತಿ ಹೊರತಾಗಿ ಬೆಂಕಿಯ ಜೊತೆ ಬದುಕಲು ಆಗುವುದಿಲ್ಲ. ಇವತ್ತು ಜ್ಯೋತಿಗೆ ನಾವು ಎಣ್ಣೆ ಹಾಕುತ್ತೇವೆ. ಆದರೆ ಬೆಂಕಿಗೆ ಫೈರ್ ಇಂಜಿನ್ ತರುತ್ತೇವೆ. ಸಿದ್ದರಾಮಯ್ಯನವರೇ ನೀವು ಜ್ಯೋತಿ ಇದ್ದಂತೆ, ಯಾವಾಗಲೂ ಬೆಳಗುತ್ತಿರಬೇಕು. ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ,” ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಅನುದಾನ ಮತ್ತು ಭದ್ರತೆಗೆ ಆಗ್ರಹ:
ಇದೇ ವೇಳೆ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಸಿಎಂ ಮುಂದಿಟ್ಟ ಮುನಿರತ್ನ, “ಅಣ್ಣ, ನಮ್ಮ ಕ್ಷೇತ್ರದಲ್ಲಿ ಹಲವು ಕೆಲಸಗಳು ನಿಂತು ಹೋಗಿವೆ. ದಯವಿಟ್ಟು ನನ್ನ ಕ್ಷೇತ್ರಕ್ಕೆ ಸಹಾಯ ಮಾಡಿ, ಅನುದಾನ ಕೊಡಿ,” ಎಂದು ಮನವಿ ಮಾಡಿದರು.
ಅಲ್ಲದೆ, ತಮಗೆ ಗನ್‌ಮ್ಯಾನ್ ನೀಡದಿರುವ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, “ನನಗೆ ಗನ್‌ಮ್ಯಾನ್ ಕೊಟ್ಟಿಲ್ಲ, ನಾನು ಓಡಾಡಬಾರದು ಎಂದು ಗನ್‌ಮ್ಯಾನ್ ಕೊಟ್ಟಿಲ್ಲ. ಮನೆಯಲ್ಲಿ ಇರಲಿ, ಹೊರಗೆ ಬಂದರೆ ಮೊಟ್ಟೆಯಲ್ಲಿ ಹೊಡಿಬಹುದು ಎಂದು ಹೀಗೆ ಮಾಡಿದ್ದಾರೆ. ಪ್ರಜಾಪ್ರಭುತ್ವ ರಾಜ್ಯ ಇದು. ದಯವಿಟ್ಟು ನನಗೆ ಗನ್‌ಮ್ಯಾನ್ ಕೊಡಿ,” ಎಂದು ಬಹಿರಂಗವಾಗಿ ಬೇಡಿಕೆಯಿಟ್ಟರು.
ಸಿದ್ದರಾಮಯ್ಯನವರಿಂದ ಹಾಸ್ಯ ಚಟಾಕಿ:
ಬಳಿಕ ವೇದಿಕೆ ಏರಿದ ಸಿಎಂ ಸಿದ್ದರಾಮಯ್ಯ ಅವರು, ತಮ್ಮ ಮಾತು ಆರಂಭಿಸುತ್ತಿದ್ದಂತೆ ಶಾಸಕ ಮುನಿರತ್ನ ಅವರಿಗೆ ಕಿಚಾಯಿಸಿದರು. “ಏಯ್ ಮುನಿರತ್ನ, ವೃಷಭಾವತಿ ಪ್ರೊಡಕ್ಷನ್,” ಎಂದು ಮಾತು ಆರಂಭಿಸಿ, “ಮುನಿರತ್ನ 2013-18ರ ತನಕ ಒಳ್ಳೆಯವನಾಗಿದ್ದ,” ಎನ್ನುತ್ತಿದ್ದಂತೆ ನೆರೆದಿದ್ದ ಬೆಂಬಲಿಗರು “ಈಗಲೂ ಒಳ್ಳೆಯವರೇ,” ಎಂದು ಕೂಗಿದರು.
ಇದಕ್ಕೆ ನಕ್ಕ ಸಿಎಂ, “ಓಹೋ! ಈಗಲೂ ಒಳ್ಳೆಯವನಾ? ಆಯ್ತು. ಆಗ ನಾನು ನಿನಗೆ ಸಹಾಯ ಮಾಡಿದ್ದೆ. ನೀನು ಅದನ್ನು ಹೇಳೋದೇ ಇಲ್ಲ. ನಮ್ಮನ್ನ ಬಿಟ್ಟು ಅಲ್ಲಿಗೆ ಹೋಗಿಬಿಟ್ಟ,” ಎಂದು ರಾಜಕೀಯ ಜಟಾಪಟಿಯನ್ನು ನೆನಪಿಸಿ ಚುಟಾಕಿ ಹಾರಿಸಿದರು. ಒಟ್ಟಾರೆ, ಈ ಉತ್ಸವವು ರಾಜಕೀಯ ಸಮಾರಂಭದಂತೆಯೇ ಸಾಗಿ, ನಾಯಕರಿಬ್ಬರ ನಡುವಿನ ಆತ್ಮೀಯತೆ ಮತ್ತು ಹಳೆಯ ದಿನಗಳ ನೆನಪುಗಳಿಗೆ ಸಾಕ್ಷಿಯಾಯಿತು.