ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಶಬರಿಮಲೆ ದೇವಸ್ಥಾನದ ಚಿನ್ನ ಕಳ್ಳತನ ಪ್ರಕರಣದ ತನಿಖೆಗಾಗಿ ಕೇರಳ ಹೈಕೋರ್ಟ್ ನೇಮಕ ಮಾಡಿದ್ದ ವಿಶೇಷ ತನಿಖಾ ತಂಡ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೊಟ್ಟಿಯನ್ನು ಬಂಧಿಸಿದೆ.
ಬೆಂಗಳೂರು ಮೂಲದ ಉದ್ಯಮಿ ಆಗಿರುವ ಉಣ್ಣಿಕೃಷ್ಣನ್ ಪೊಟ್ಟಿಯನ್ನು ಅವರ ನಿವಾಸದಿಂದ ವಶಕ್ಕೆ ಪಡೆಯಲಾಗಿದ್ದು, ಗುರುವಾರ ಕ್ರೈಂ ಬ್ರಾಂಚ್ ಕಚೇರಿಯಲ್ಲಿ ಸುಮಾರು 12 ಗಂಟೆಗಳ ವಿಚಾರಣೆ ನಂತರ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈಗ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ತಿರುವನಂತಪುರಂ ಜನರಲ್ ಆಸ್ಪತ್ರೆಗೆ ಕರೆತರಲಾಗಿದ್ದು, ಮಧ್ಯಾಹ್ನದ ವೇಳೆಗೆ ಪಟ್ಟನಂತಿಟ್ಟಕ್ಕೆ ಸ್ಥಳಾಂತರಿಸಿ, ರಾಣಿ ನ್ಯಾಯಾಲಯದ ಮುಂದೆ ಹಾಜರಿ ಪಡಿಸಲಾಗುತ್ತದೆ. SIT ವಿಚಾರಣೆಗಾಗಿ ಕಸ್ಟಡಿ ಕೋರಲಿದೆ.
ಪ್ರಸ್ತುತ ಎಸ್ಐಟಿ ಅಧಿಕಾರಿಗಳು ಶಬರಿಮಲೆ ದೇವಸ್ಥಾನದ ದ್ವಾರಪಾಲಕ ವಿಗ್ರಹಗಳ ಚಿನ್ನದ ಹೊದಿಕೆಯ ತಾಮ್ರ ತಗಡುಗಳ ಕಳ್ಳತನ ಹಾಗೂ ಶ್ರೀಕೋವಿಲ್ (ಗರ್ಭಗುಡಿ) ಬಾಗಿಲಿನ ಚೌಕಟ್ಟುಗಳ ಚಿನ್ನ ಕಳ್ಳತನ ಪ್ರಕರಣಗಳ ತನಿಖೆ ನಡೆಸುತ್ತಿದೆ.
ಈ ಪ್ರಕರಣ 2019ರಲ್ಲಿ ಶಬರಿಮಲೆ ದೇವಸ್ಥಾನದ ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹಗಳ ಚಿನ್ನದ ಹೊದಿಕೆಯ ತಾಮ್ರ ತಗಡುಗಳ ಕಳ್ಳತನದಿಂದ ಆರಂಭವಾಯಿತು. ಇದರ ಜೊತೆಗೆ ಶ್ರೀಕೋವಿಲ್ (ಗರ್ಭಗುಡಿ) ಬಾಗಿಲಿನ ಚೌಕಟ್ಟುಗಳ ಚಿನ್ನ ಕಳ್ಳತನವೂ ಸೇರಿದೆ. ತಿರುವಾಂಕೂರು ದೇವಸ್ವಂ ಬೋರ್ಡ್ (TDB) ಸದಸ್ಯರು ಮತ್ತು ಅಧಿಕಾರಿಗಳು, ಚಿನ್ನದ ಲೇಪನಕ್ಕಾಗಿ ಈ ಚಿನ್ನವನ್ನು ಪೊಟ್ಟಿಗೆ ಹಸ್ತಾಂತರಿಸಿದ್ದರು ಎಂದು ಆರೋಪವಿದೆ.