ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಸಂಭ್ರಮ. ಈಗಾಗಲೇ ಎಲ್ಲೆಡೆ ಹಬ್ಬದ ಸಿದ್ಧತೆ ನಡೆಯುತ್ತಿದೆ. ಹಬ್ಬಕ್ಕೆ ಬೇಕಾದ ತಿಂಡಿ ತಿನಿಸು, ಪಟಾಕಿ ಇತ್ಯಾದಿಗಳ ಖರೀದಿ ಕೂಡ ಜೋರಾಗಿಯೇ ನಡೆಯುತ್ತಿದೆ.
ಈ ನಡುವೆ ಹಬ್ಬಕ್ಕೆ ಎರಡು ಸಿನಿಮಾಗಳ ಪಟಾಕಿಯ ಅಬ್ಬರ ಪ್ರಾರಂಭವಾಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್ ಹಾಗೂ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾದ ಹೆಸರನ್ನು ಇಟ್ಟುಕೊಂಡು ಪಟಾಕಿ ಕಂಪೆನಿಗಳು ತಮ್ಮ ಪ್ರಾಡೆಕ್ಟ್ ಅನ್ನು ಮಾರುಕಟ್ಟೆಗೆ ಬಿಟ್ಟಿವೆ.
ಈಗಾಗಲೇ ಕಾಂತಾರ ಹಾಗೂ ಕೆ.ಜಿ.ಎಫ್.ಪಟಾಕಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಅಭಿಮಾನಿಗಳು ಖರೀದಿಸಿ ದೀಪಾವಳಿಗೂ ಮುನ್ನವೆ ಪಟಾಕಿ ಸಿಡಿಸಿ ಖುಷಿ ಪಟ್ಟಿದ್ದಾರೆ. ಇನ್ನು ಈ ಬಗ್ಗೆ ಪಟಾಕಿ ಖರೀದಿ ಮಾಡಿ ಖುಷಿ ಪಡುವ ಬಳಗ ಒಂದೆಡೆಯಾದರೆ ಇನ್ನೊಂದೆಡೆ ಈ ರೀತಿ ಟ್ರಿಕ್ಸ್ ಬಳಸಿ ಅಭಿಮಾನಿಗಳ ಎಮೋಷನ್ಸ್ ಅನ್ನು ಮಾರಾಟಗಾರರು ದುರ್ಬಳಕೆ ಮಾಡುತ್ತಿದ್ದಾರೆ ಎಂಬ ವಿರೋಧಗಳು ಕೂಡ ಸೋಶಿಯಲ್ ಮಿಡಿಯಾದಲ್ಲಿ ವ್ಯಕ್ತವಾಗುತ್ತಿದೆ.
ಸೂಪರ್ ಹಿಟ್ ಸಿನಿಮಾಗಳ ಹೆಸರನ್ನೇ ಬಳಸಿಕೊಂಡು ತಮ್ಮ ಬ್ರ್ಯಾಂಡ್ ಪ್ರಮೋಟ್ ಮಾಡುವ ವಿಚಾರವು ಈ ಹಿಂದಿನಿಂದಲೂ ಇದೆ. ಯಜಮಾನ ಉಪ್ಪಿನಕಾಯಿ, ಆಪ್ತಮಿತ್ರ ಸೀರೆ, ಸೂಪರ್ ಇಂಡಸ್ಟ್ರಿಯಲ್ ಸ್ಟೀಲ್ ಹೀಗೆ ಸಿನಿಮಾದ ಜೊತೆಗೆ ತಮ್ಮ ಬ್ರ್ಯಾಂಡ್ ಅನ್ನು ಕೂಡ ಪ್ರಮೋಟ್ ಮಾಡಲಾಗಿತ್ತು. ಇತ್ತೀಚೆಗಷ್ಟೇ ಗಣೇಶ ಹಬ್ಬದ ಸಂದರ್ಭದಲ್ಲಿ ‘ಬಾಹುಬಲಿ’ ಅವತಾರದ ಗಣೇಶ, ‘KGF’ ರಾಕಿಭಾಯ್ ಸ್ಟೈಲ್ ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡಿದ್ದರು. ಇದೀಗ ದೀಪಾವಳಿಗೆ ‘ಕಾಂತಾರ’, ಕೆಜಿಎಫ್ ಶಾಟ್ಸ್ ಪಟಾಕಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.