ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುತ್ತೂರು-ಕಾಣಿಯೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಶುಕ್ರವಾರ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. 80 ಅಡಿ ಆಳದ ಕಣಿವೆಗೆ ಕಾರೊಂದು ಉರುಳಿದ್ದು, ಅದರಲ್ಲಿದ್ದ ಇಬ್ಬರು ಪ್ರಯಾಣಿಕರು ಪವಾಡಸದೃಶವಾಗಿ ಪಾರಾಗಿದ್ದಾರೆ.
ಪುತ್ತೂರಿನಿಂದ ಸುಬ್ರಹ್ಮಣ್ಯಕ್ಕೆ ಹೊರಟಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಿಂದ ಆಳವಾದ ಕಣಿವೆಗೆ ಬಿದ್ದಿದೆ ಎನ್ನಲಾಗಿದೆ.
ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದರೂ, ಅದೃಷ್ಟವಶಾತ್, ಕಾರಿನ ಚಾಲಕ ಮತ್ತು ಪ್ರಯಾಣಿಕರಿಬ್ಬರೂ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಅವರನ್ನು ತಕ್ಷಣ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾತ್ರಿ ವೇಳೆ ನಡೆದ ಈ ಘಟನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.