September 24, 2026
Thursday, September 24, 2026
spot_img

ಯುವತಿ ಆತ್ಮಹ*ತ್ಯೆ: ಜ್ಯೋತಿಷಿ ಅಲ್ಪಾಯುಷಿ ಎಂದಿದ್ದಕ್ಕೆ ನೇಣಿಗೆ ಶರಣಾದ ಟೆಕ್ಕಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದ ಬಾಗಲಗುಂಟೆ ಪ್ರದೇಶದ ಎಂಇಐ ಲೇಔಟ್‌ನಲ್ಲಿ 29 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ವಿದ್ಯಾಜ್ಯೋತಿ ಎಂಬ ಯುವತಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ಇತ್ತೀಚೆಗೆ ವರ್ಕ್ ಫ್ರಂ ಹೋಮ್ ಮೂಲಕ ಕೆಲಸ ನಿರ್ವಹಿಸುತ್ತಿದ್ದಳು ಎಂದು ತಿಳಿದುಬಂದಿದೆ.

ಕುಟುಂಬದ ಮೂಲಗಳ ಪ್ರಕಾರ, ಕೆಲ ದಿನಗಳ ಹಿಂದೆ ಜ್ಯೋತಿಷಿಯೊಬ್ಬರು ಆಕೆಗೆ ಅಲ್ಪಾಯುಷಿ ಎಂದು ಭವಿಷ್ಯ ನುಡಿದಿದ್ದರು ಎನ್ನಲಾಗಿದೆ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಮಗಳ ಇಷ್ಟಗಳನ್ನೆಲ್ಲ ನೆರವೇರಿಸಲು ಮುಂದಾಗಿದ್ದರು. ಕೊಡಗು ಮೂಲದ ಯುವಕನೊಂದಿಗೆ ಆಕೆ ಪ್ರೀತಿಯಲ್ಲಿ ಇದ್ದು, ಇಬ್ಬರ ಮದುವೆಗೆ ಎರಡೂ ಮನೆಗಳ ಒಪ್ಪಿಗೆಯೂ ಸಿಕ್ಕಿತ್ತು.

ಇದನ್ನೂ ಓದಿ:

ಜ್ಯೋತಿಷಿಯ ಸಲಹೆಯಂತೆ ಒಂಬತ್ತು ದಿನಗಳ ಪೂಜೆ ನಡೆಯುತ್ತಿದ್ದು, ಕೊನೆಯ ದಿನ ವಿಶೇಷ ವಿಧಿ ನೆರವೇರಿಸಲು ಸಿದ್ಧತೆ ಮಾಡಿಕೊಂಡಿದ್ದರು. ಮಧ್ಯಾಹ್ನ ಊಟದ ಬಳಿಕ ವಿದ್ಯಾಜ್ಯೋತಿ ತನ್ನ ಕೊಠಡಿಗೆ ತೆರಳಿದ್ದಳು. ಸಂಜೆ ಹಾಗೂ ರಾತ್ರಿ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಅನುಮಾನಗೊಂಡ ತಾಯಿ ಕಿಟಕಿಯಿಂದ ನೋಡಿದಾಗ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಘಟನೆಯ ಮಾಹಿತಿ ತಿಳಿದು ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

Must Read