ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಬಿಜೆಪಿ ಘಟಕದ ಮಾಜಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅಭಿಮಾನಿಗಳಲ್ಲಿ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.
ಅದೇನೆಂದರೆ,ತಮ್ಮ ಹೆಸರನ್ನು ಅನಗತ್ಯ ಬಳಸುವುದನ್ನು ನಿಲ್ಲಿಸುವಂತೆ ಹೇಳಿದ್ದಾರೆ.
ಅಣ್ಣಾಮಲೈ ಅವರ ಬೆಂಬಲಿಗರು ತಿರುನಲ್ವೇಲಿ ಪ್ರದೇಶದಲ್ಲಿ ‘ಅಣ್ಣಾಮಲೈ ನರ್ಪಣಿ ಮಂಟ್ರಂ'(‘ಅಣ್ಣಾಮಲೈ ಚಾರಿಟಿ ಫೌಂಡೇಶನ್’) ಆರಂಭಿಸಿದ್ದರು. ಈ ಚಾರಿಟಿ ಫೌಂಡೇಶನ್ ಲೋಗೋ ಮತ್ತು ಧ್ವಜ ಬಿಡುಗಡೆ ಮಾಡಲಾಗಿತ್ತು. ಈ ಚಾರಿಟಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ನೆಲ್ಲೈ ವೇಲ್ಕಣ್ಣನ್ ಎಂಬವರು ಈ ಚಾರಿಟಿಯ ಅಧ್ಯಕ್ಷರಾಗಿದ್ದರು. ನೆಲ್ಲೈ ವೇಲ್ಕಣ್ಣನ್ ಅವರೇ ಧ್ವಜ ಅನಾವರಣ ಮಾಡಿದ್ದರು.
ಇದೀಗ ತಮ್ಮಿಂದ ಯಾವುದೇ ಅನುಮತಿ ಪಡೆಯದೇ, ತಮ್ಮ ಫೋಟೋ ಮತ್ತು ಹೆಸರಿನಲ್ಲಿ ಚಾರಿಟಿ ಫೌಂಡೇಶನ್ ಆರಂಭವಾಗಿರುವ ವಿಷಯ ಅಣ್ಣಾಮಲೈ ಅವರ ಗಮನಕ್ಕೆ ಬಂದಿದೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಅಣ್ಣಾಮಲೈ ಕೆಲವೊಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ತಿರುನಲ್ವೇಲಿಯಲ್ಲಿ ನನ್ನ ಹೆಸರಿನಲ್ಲಿ ನರ್ಪಣಿ ಮಂಟ್ರಂ ಸ್ಥಾಪಿಸಿ, ಧ್ವಜ ಪರಿಚಯಿಸಲಾಗಿದೆ ಎಂಬುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ನೀವು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ನಾನು ಸದಾ ಋಣಿಯಾಗಿರುತ್ತೇನೆ. ಆದ್ರೆ ಇಂತಹ ಸಂಘ ಮತ್ತು ಧ್ವಜಗಳಿಗೆ ನನ್ನ ಒಪ್ಪಿಗೆ ಇಲ್ಲ ಎಂದು ಅಣ್ಣಾಮಲೈ ತಿಳಿಸಿದ್ದಾರೆ.
ದಯವಿಟ್ಟು ನನ್ನ ಹೆಸರು, ಫೋಟೋ ಇತ್ಯಾದಿಗಳನ್ನು ಬಳಸುವ ಇಂತಹ ಚಟುವಟಿಕೆಗಳನ್ನು ತಕ್ಷಣವೇ ಕೈಬಿಡುವಂತೆ ಕೇಳಿಕೊಳ್ಳುತ್ತೇನೆ. ಮುಂದಿನ ದಿನಗಳಲ್ಲೂ ಇಂತಹ ಚಟುವಟಿಕೆಗಳನ್ನು ಮಾಡದಂತೆ ಎಲ್ಲರಲ್ಲೂ ಮನವಿ ಮಾಡುತ್ತೇನೆ. ಗೋಡೆ ಇದ್ದರೆ ತಾನೇ ಚಿತ್ರ ಬರೆಯಲು ಸಾಧ್ಯ. ಹಾಗಾಗಿ, ಎಲ್ಲರೂ ಮೊದಲು ನಿಮ್ಮ ಜೀವನಕ್ಕೆ, ನಿಮ್ಮ ಕುಟುಂಬದವರ ಒಳಿತನ್ನು ಸುಧಾರಿಸಲು ಆದ್ಯತೆ ನೀಡಿ ಎಂದು ಕೇಳಿಕೊಳ್ಳುತ್ತೇನೆ. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಮತ್ತೊಮ್ಮೆ ನನ್ನ ಮನಃಪೂರ್ವಕ ಧನ್ಯವಾದಗಳು ಎಂದು ಹೇಳಿದ್ದಾರೆ.