ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಮತ್ತೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಅವರ ನಿರ್ದೇಶನ ಮತ್ತು ಅಭಿನಯದಲ್ಲಿ ಮೂಡಿಬಂದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಪ್ರೇಕ್ಷಕರ ಹೃದಯ ಗೆದ್ದು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಸಾಧಿಸಿದೆ. ಅಕ್ಟೋಬರ್ 2ರಂದು ಬಿಡುಗಡೆ ಆದ ಈ ಚಿತ್ರ ಈಗಾಗಲೇ 17 ದಿನ ಪೂರೈಸಿದ್ದು, ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಬ್ಬರಿಸುತ್ತಿದೆ.
ವರದಿಗಳ ಪ್ರಕಾರ, 17ನೇ ದಿನದ ವೇಳೆಗೆ ಚಿತ್ರವು ಭಾರತದಲ್ಲಿ 12.50 ಕೋಟಿ ರೂಪಾಯಿ ಗಳಿಸಿದ್ದು, ಒಟ್ಟು ಕಲೆಕ್ಷನ್ 506 ಕೋಟಿ ರೂಪಾಯಿಗೆ ತಲುಪಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ಎಲ್ಲೆಡೆ ಯಶಸ್ಸಿನ ಶಿಖರವನ್ನು ಏರುತ್ತಿದೆ.
‘ಹೊಂಬಾಳೆ ಫಿಲ್ಮ್ಸ್’ ನಿರ್ಮಿಸಿದ ಈ ಚಿತ್ರವು ವಿದೇಶದಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಎರಡು ವಾರಗಳಲ್ಲಿ ಜಾಗತಿಕವಾಗಿ 717.50 ಕೋಟಿ ರೂಪಾಯಿ ಗಳಿಸಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆಯು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ದೀಪಾವಳಿ ರಜಾದಿನಗಳು ಬಂದಿರುವುದರಿಂದ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆಯು ಹೆಚ್ಚುವ ನಿರೀಕ್ಷೆಯಿದೆ.
‘ಕಾಂತಾರ: ಚಾಪ್ಟರ್ 1’ ಯಶಸ್ಸು ರಿಷಬ್ ಶೆಟ್ಟಿ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದ ಖ್ಯಾತಿ ತಂದಿದ್ದು, ಅವರ ಅಭಿನಯ ಹಾಗೂ ನಿರ್ದೇಶನದ ಮೆಚ್ಚುಗೆ ಎಲ್ಲೆಡೆ ಕೇಳಿಬರುತ್ತಿದೆ. ನಾಯಕಿಯಾಗಿ ನಟಿಸಿರುವ ರುಕ್ಮಿಣಿ ವಸಂತ್ ಅವರು ಕೂಡ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.