ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನಾಂಬ ದೇವಾಲಯದಲ್ಲಿ ದೇವಿಯ ದರುಶನಕ್ಕೆ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುತ್ತಿದ್ದಾರೆ. ಭಕ್ತರ ಹೆಚ್ಚುತ್ತಿರುವ ಸಂಖ್ಯೆಯಿಂದ ನೂಕುನುಗ್ಗಲು ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಹಾಸನ ಜಿಲ್ಲೆಯ ಪೊಲೀಸ್ ಅಧಿಕಾರಿ ಮೊಹಮ್ಮದ್ ಸುಜೀತ್ ಅವರು ಜಿಲ್ಲಾಧಿಕಾರಿ ಲತಾ ಕುಮಾರಿಯವರಿಗೆ ಎಚ್ಚರಿಕೆ ಪತ್ರ ಬರೆದು, ಭಕ್ತರನ್ನು ನಿಯಂತ್ರಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ರಾಜ್ಯದೆಲ್ಲೆಡೆಗೂ ಸೇರಿ ಹೊರರಾಜ್ಯಗಳಿಂದಲೂ ಸಾವಿರಾರು ಭಕ್ತರು ಹಾಸನಾಂಬ ದೇವಿಯ ದರುಶನಕ್ಕೆ ಆಗಮಿಸುತ್ತಿದ್ದಾರೆ. ದೇವಾಲಯದ ಸುತ್ತಮುತ್ತ ರಸ್ತೆವರೆಗೂ ಭಕ್ತರ ಸರತಿ ಸಾಲು ವಿಸ್ತರಿಸಿದ್ದು, ಸ್ಥಳಾವಕಾಶದ ಕೊರತೆಯಿಂದ ದರ್ಶನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗುವ ಭೀತಿ ವ್ಯಕ್ತವಾಗಿದೆ. ದೀಪಾವಳಿ ರಜೆಯ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಸ್‌ಪಿ ಸುಜೀತ್ ಅವರ ಪತ್ರದಲ್ಲಿ, “ದರುಶನ ಸ್ಥಳದಲ್ಲಿ ನೂಕುನುಗ್ಗಲು ಹೆಚ್ಚಾದರೆ ಯಾವುದೇ ಅಹಿತಕರ ಘಟನೆ ಸಂಭವಿಸಬಹುದು. ಭಕ್ತರನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಯಾವುದೇ ಅನಾಹುತ ಸಂಭವಿಸಿದರೆ ಪೊಲೀಸ್ ಇಲಾಖೆ ಜವಾಬ್ದಾರಿಯಲ್ಲ” ಎಂದು ಉಲ್ಲೇಖಿಸಲಾಗಿದೆ.
ಇದೇ ವೇಳೆ, ದೇವಾಲಯದ ವೇಳಾಪಟ್ಟಿಯಂತೆ ಇಂದು ಮಧ್ಯಾಹ್ನ 2 ಗಂಟೆಯಿಂದ 3.30ರವರೆಗೆ ನೈವೇದ್ಯ ಸಮಯದಲ್ಲಿ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ. ಬಳಿಕ ಮಧ್ಯಾಹ್ನ 3.30ರಿಂದ ನಾಳೆ ಮುಂಜಾನೆ 3 ಗಂಟೆಯವರೆಗೆ ನಿರಂತರ ದರುಶನ ವ್ಯವಸ್ಥೆ ಮಾಡಲಾಗಿದೆ. ಮುಂಜಾನೆ 3ರಿಂದ 5ರವರೆಗೆ ಮತ್ತೆ ನೈವೇದ್ಯಕ್ಕಾಗಿ ಬಾಗಿಲು ಮುಚ್ಚಲಾಗುತ್ತಿದ್ದು, ನಂತರ ಬೆಳಿಗ್ಗೆ 5ರಿಂದ ಪುನಃ ದರುಶನ ಪ್ರಾರಂಭವಾಗಲಿದೆ.