ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಅಭಿಮಾನಿಗಳು ಕಾದಿದ್ದ ಕ್ಷಣ ಬಂದಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಇಂದು ಪರ್ಥ್ ಮೈದಾನ ಸಾಕ್ಷಿಯಾಗಲಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಮೊದಲು ಬೌಲಿಂಗ್ ಆಯ್ದುಕೊಂಡಿದ್ದು, ಟೀಮ್ ಇಂಡಿಯಾ ಬ್ಯಾಟಿಂಗ್ ಆರಂಭಿಸಿದೆ. ಈ ಮೂಲಕ ಹೊಸ ನಾಯಕತ್ವದಲ್ಲಿ ಭಾರತದ ಯುವ ನಾಯಕ ಶುಭ್‌ಮನ್ ಗಿಲ್ ಮೊದಲ ಬಾರಿಗೆ ಏಕದಿನ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಈ ಪಂದ್ಯದಲ್ಲಿ ಭಾರತದ ದಿಗ್ಗಜರು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸುಮಾರು ಏಳು ತಿಂಗಳ ನಂತರ ಮತ್ತೆ ಕಣಕ್ಕಿಳಿದಿದ್ದಾರೆ. ಕೊನೆಯದಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ ಈ ಜೋಡಿಯು ಇದೀಗ ತಮ್ಮ ಕಂಬ್ಯಾಕ್ ಪಂದ್ಯದಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಗಿಲ್ ನಾಯಕತ್ವದಲ್ಲಿ ರೋಹಿತ್, ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಮತ್ತು ಅಕ್ಷರ್ ಪಟೇಲ್ ಸೇರಿದಂತೆ ಯುವ ಮತ್ತು ಅನುಭವಿಗಳ ಸಮತೋಲನಗೊಂಡ ತಂಡ ಮೈದಾನಕ್ಕಿಳಿದಿದೆ.
ಆಸ್ಟ್ರೇಲಿಯಾ ಪರವಾಗಿ ಮಿಚೆಲ್ ಮಾರ್ಷ್ ನಾಯಕತ್ವ ವಹಿಸಿದ್ದು, ಟ್ರಾವಿಸ್ ಹೆಡ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್‌ವುಡ್ ಸೇರಿದಂತೆ ಪ್ರಮುಖ ಆಟಗಾರರು ತಂಡದಲ್ಲಿ ಸೇರಿದ್ದಾರೆ. ಪರ್ಥ್‌ನ ವೇಗದ ಪಿಚ್‌ನಲ್ಲಿ ಇಬ್ಬರ ಬೌಲಿಂಗ್ ವಿಭಾಗದ ಪೈಪೋಟಿ ಉತ್ಸಾಹಭರಿತವಾಗಿರಲಿದೆ ಎಂದು ತಜ್ಞರು ನಿರೀಕ್ಷಿಸಿದ್ದಾರೆ.
ಸರಣಿಯ ವೇಳಾಪಟ್ಟಿಯ ಪ್ರಕಾರ, ಎರಡನೇ ಏಕದಿನ ಪಂದ್ಯ ಅಕ್ಟೋಬರ್ 23ರಂದು ಅಡಿಲೇಡ್ ಓವಲ್‌ನಲ್ಲಿ, ಮೂರನೇ ಮತ್ತು ಕೊನೆಯ ಪಂದ್ಯ ಅಕ್ಟೋಬರ್ 25ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಪಂದ್ಯಗಳು ಭಾರತೀಯ ಕಾಲಮಾನ ಪ್ರಕಾರ ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿವೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಈ ರೋಚಕ ಸರಣಿಯ ಎಲ್ಲಾ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರವಾಗಿ ವೀಕ್ಷಿಸಬಹುದು. ಜೊತೆಗೆ, ಜಿಯೋ ಹಾಟ್‌ಸ್ಟಾರ್ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಸಹ ಲಭ್ಯವಿದೆ.