ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲಿಗೆ ಶರಣಾಗಿದೆ. ಈ ಸೋಲಿಗೆ ಭಾರತದ ಬ್ಯಾಟಿಂಗ್ ವೈಫಲ್ಯ ಮುಖ್ಯ ಕಾರಣವಾದರೂ, ಬೌಲಿಂಗ್ ವಿಭಾಗದಲ್ಲೂ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಪರ್ತ್‌ನ ವೇಗದ ಪಿಚ್‌ನಲ್ಲಿ ಆಸೀಸ್ ಬೌಲರ್‌ಗಳು ಕರಾರುವಾಕ್ ದಾಳಿ ನಡೆಸಿದರೆ, ಭಾರತೀಯ ಬೌಲರ್‌ಗಳು ದುಬಾರಿಯಾದರು. ಈ ಪಂದ್ಯದಲ್ಲಿ ತಂಡದ ಪ್ರಮುಖ ವೇಗಿ ಜಸ್‌ಪ್ರೀತ್ ಬುಮ್ರಾ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
ಬುಮ್ರಾ ಅವರ ಬದಲಿಗೆ ಯುವ ಬೌಲರ್ ಹರ್ಷಿತ್ ರಾಣಾ ಕಣಕ್ಕಿಳಿದಿದ್ದರು. ಆದರೆ, ಬುಮ್ರಾ ಯಾಕೆ ಆಡಿಲ್ಲ ಎಂಬ ಪ್ರಶ್ನೆಗೆ ಉತ್ತರ ಸ್ಪಷ್ಟ: ಅವರಿಗೆ ಈ ಸಂಪೂರ್ಣ ಮೂರು ಪಂದ್ಯಗಳ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.
ಸರಣಿಗಳಿಂದ ಸರಣಿಗಳಿಗೆ ವಿಶ್ರಾಂತಿ: ಬುಮ್ರಾ ಫಾರ್ಮ್ ಬಗ್ಗೆ ಹೊಸ ಚರ್ಚೆ!
ಕಳೆದ ಕೆಲವು ಸರಣಿಗಳಿಂದ ಜಸ್‌ಪ್ರೀತ್ ಬುಮ್ರಾ ಅವರ ಲಭ್ಯತೆ ಮತ್ತು ಪ್ರದರ್ಶನ ಹೊಸ ಚರ್ಚೆಗೆ ನಾಂದಿ ಹಾಡಿದೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಬೆನ್ನು ನೋವಿನ ಸಮಸ್ಯೆಗೆ ಒಳಗಾದ ನಂತರ ಬುಮ್ರಾ ಸತತವಾಗಿ ಎಲ್ಲಾ ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ.
ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಂಬ್ಯಾಕ್ ಮಾಡಿದ್ದರೂ, 5 ಪಂದ್ಯಗಳ ಸರಣಿಯಲ್ಲಿ ಆಡಿದ್ದು ಕೇವಲ ಮೂರು ಪಂದ್ಯಗಳನ್ನು ಮಾತ್ರ. ನಂತರ ಏಷ್ಯಾಕಪ್ ಟೂರ್ನಿಯಲ್ಲೂ ಎರಡು ಪಂದ್ಯಗಳಿಂದ ಅವರು ಹೊರಗುಳಿದಿದ್ದರು.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿದ್ದರೂ, ಅವರಿಂದ ನಿರೀಕ್ಷಿತ ಮೊನಚಿನ ಪ್ರದರ್ಶನ ಮೂಡಿಬಂದಿರಲಿಲ್ಲ. ಪ್ರಮುಖ ಸರಣಿಗಳಲ್ಲಿ ಬುಮ್ರಾ ವಿಶ್ರಾಂತಿ ಪಡೆಯುತ್ತಿರುವುದು ಇದೀಗ ಕ್ರೀಡಾ ವಲಯದಲ್ಲಿ ಬಿಸಿ ಚರ್ಚೆಗೆ ಕಾರಣವಾಗಿದೆ. ಇಂಗ್ಲೆಂಡ್ ವಿರುದ್ಧ 2 ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದ ಬುಮ್ರಾ, ಇದೀಗ ಆಸ್ಟ್ರೇಲಿಯಾ ವಿರುದ್ಧದ ಇಡೀ ಏಕದಿನ ಸರಣಿಯಿಂದಲೂ ಹೊರಗುಳಿದಿದ್ದಾರೆ.
ಈ ಸತತ ವಿಶ್ರಾಂತಿ ಅವರ ಬೌಲಿಂಗ್ ಮೊನಚನ್ನು ಕಡಿಮೆ ಮಾಡುತ್ತಿದೆಯೇ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ, ಏಷ್ಯಾಕಪ್‌ನಲ್ಲಿ 5 ಪಂದ್ಯಗಳಿಂದ ಕೇವಲ 7 ವಿಕೆಟ್‌ಗಳನ್ನು ಪಡೆದರೆ, ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳಿಂದ ಕೇವಲ 4 ವಿಕೆಟ್‌ಗಳನ್ನು ಮಾತ್ರ ಕಬಳಿಸಿದ್ದರು.
ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೂಲಕ ಕಂಬ್ಯಾಕ್ ಮಾಡುವ ನಿರೀಕ್ಷೆಯಿದೆ. ಆದರೆ, ಅವರು ಎಲ್ಲಾ ಐದು ಪಂದ್ಯಗಳನ್ನು ಆಡುತ್ತಾರೆಯೇ ಎಂಬುದು ಸದ್ಯಕ್ಕೆ ಖಚಿತವಾಗಿಲ್ಲ. ಫಾರ್ಮ್ ಮತ್ತು ಫಿಟ್‌ನೆಸ್ ನಿರ್ವಹಣೆಯ ಈ ನಿರ್ಧಾರ ತಂಡದ ಗೆಲುವಿನ ಮೇಲೆ ಪರಿಣಾಮ ಬೀರುತ್ತಿರುವುದು ಸ್ಪಷ್ಟವಾಗಿದೆ.