ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕಾದ ಎಚ್-1ಬಿ ವೀಸಾ ಶುಲ್ಕ ಹೆಚ್ಚಳದ ನಿರ್ಧಾರದಿಂದಾಗಿ ಕಳೆದ ಕೆಲವು ವಾರಗಳಿಂದ ತೀವ್ರ ಚರ್ಚೆ ನಡೆಯುತ್ತಿದ್ದರೆ, ಇದೀಗ ಟ್ರಂಪ್ ಸರ್ಕಾರ ನೀಡಿರುವ ಹೊಸ ಸ್ಪಷ್ಟನೆ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಮತ್ತು ವಿದೇಶಿ ಉದ್ಯೋಗಿಗಳಿಗೆ ದೊಡ್ಡ ಸಮಾಧಾನ ಸಿಕ್ಕಿದೆ. ಕಳೆದ ತಿಂಗಳು, ಅಂದರೆ ಸೆಪ್ಟೆಂಬರ್ 19, 2025ರಂದು, ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಎಚ್-1ಬಿ ವೀಸಾ ಅರ್ಜಿಗೆ 1 ಲಕ್ಷ ಡಾಲರ್‌ಗಳಷ್ಟು ಭಾರೀ ಶುಲ್ಕ ವಿಧಿಸುವುದಾಗಿ ಘೋಷಿಸಿತ್ತು. ಈ ನಿರ್ಧಾರವು ಉದ್ಯೋಗದಾತರು ಮತ್ತು ವೀಸಾ ಹೊಂದಿರುವವರಲ್ಲಿ ಗೊಂದಲಕ್ಕೆ ಕಾರಣವಾಗಿತ್ತು.
ಆದರೆ ಇದೀಗ ಯುಎಸ್‌ಸಿಐಎಸ್ (USCIS) ನೀಡಿರುವ ಸ್ಪಷ್ಟನೆಯ ಪ್ರಕಾರ, ಈಗಾಗಲೇ ಅಮೆರಿಕಾದಲ್ಲಿ ವ್ಯಾಸಂಗ ಮಾಡುತ್ತಿರುವ ಎಫ್-1 ವೀಸಾ ವಿದ್ಯಾರ್ಥಿಗಳು ಅಥವಾ ತಮ್ಮ ವಾಸ್ತವ್ಯ ವಿಸ್ತರಿಸಲು ಬಯಸುವವರು ಈ ದುಬಾರಿ ಶುಲ್ಕ ಪಾವತಿಸಬೇಕಾಗಿಲ್ಲ. ಅಂದರೆ, ಎಫ್-1 ವೀಸಾದಿಂದ ಎಚ್-1ಬಿ ವೀಸಾಕ್ಕೆ ಬದಲಾಗುವವರಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಆದರೆ ಅಮೆರಿಕಾದ ಹೊರಗಿನಿಂದ ಹೊಸ ಎಚ್-1ಬಿ ವೀಸಾಗೆ ಅರ್ಜಿ ಸಲ್ಲಿಸುವವರು ಮಾತ್ರ ಈ ಶುಲ್ಕವನ್ನು ಪಾವತಿಸಬೇಕಾಗಿದೆ.
ಪಾಲಿಸಿಯ ಈ ತಿದ್ದುಪಡಿಯಿಂದ ಅಮೆರಿಕಾದಲ್ಲಿ ಓದುತ್ತಿರುವ ಮತ್ತು ಉದ್ಯೋಗ ಹುಡುಕುತ್ತಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳಿಗೆ ನಿಟ್ಟುಸಿರು ಸಿಕ್ಕಿದೆ. ಇದೇ ವೇಳೆ, ಟ್ರಂಪ್ ಆಡಳಿತವು ವೀಸಾ ದುರ್ಬಳಕೆಯನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದರೂ, ಅದರ ಪರಿಣಾಮ ಉದ್ಯಮ ಕ್ಷೇತ್ರದ ಮೇಲೆ ಬೀರಬಹುದಾದ ಹೊಡೆತವನ್ನು ಕಡಿಮೆಗೊಳಿಸಲು ಹೊಸ ವಿನಾಯಿತಿಯನ್ನು ತಂದಿದೆ. ಇದರಿಂದ ಅಮೆರಿಕಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ಎಲ್-1 ವೀಸಾ ಉದ್ಯೋಗಿಗಳಿಗೆ ಹೊಸ ಆಶಾಕಿರಣ ಮೂಡಿದೆ.