ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಗೆದ್ದ ಏಷ್ಯಾಕಪ್ ಟ್ರೋಫಿ ಈಗ ಪಾಕಿಸ್ತಾನದ ಕೈಯಲ್ಲಿ ಸಿಲುಕಿರುವ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ನಡೆದ ಏಷ್ಯಾ ಕಪ್ ಟಿ20 ಫೈನಲ್‌ನಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವು ಸಾಧಿಸಿದರೂ, ಟ್ರೋಫಿಯು ಇನ್ನೂ ಟೀಂ ಇಂಡಿಯಾದ ಕೈಗೆ ತಲುಪಿಲ್ಲ. ಇದರಿಂದ ಅಸಮಾಧಾನಗೊಂಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಮೊಹ್ಸಿನ್ ನಖ್ವಿಗೆ ಅಧಿಕೃತವಾಗಿ ಇಮೇಲ್ ಮೂಲಕ ಪತ್ರ ಬರೆದು, ಟ್ರೋಫಿಯನ್ನು ಭಾರತಕ್ಕೆ ಹಸ್ತಾಂತರಿಸಲು ಸೂಚಿಸಿದೆ.
ಕಳೆದ ಸೆಪ್ಟೆಂಬರ್ 28 ರಂದು ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತವು 5 ವಿಕೆಟ್‌ಗಳ ಅಂತರದಿಂದ ಪಾಕಿಸ್ತಾನವನ್ನು ಮಣಿಸಿತು. ಪಂದ್ಯ ಅಂತ್ಯವಾದ ನಂತರ ಟ್ರೋಫಿ ಪ್ರದಾನ ಸಮಾರಂಭದಲ್ಲಿ ಮೊಹ್ಸಿನ್ ನಖ್ವಿ ಕೈಯಿಂದ ಟೀಂ ಇಂಡಿಯಾ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು. ಬಳಿಕ ನಖ್ವಿ ಟ್ರೋಫಿಯನ್ನು ತಮ್ಮೊಂದಿಗೆ ತೆಗೆದುಕೊಂಡು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಿಂದ ಹೊರಟಿದ್ದರು.
ಈ ಕುರಿತು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಪ್ರತಿಕ್ರಿಯೆ ನೀಡಿದ್ದು “ನಖ್ವಿ ಅವರಿಂದ ಯಾವುದೇ ಉತ್ತರ ಬಂದಿಲ್ಲ. ಅವರು ಪ್ರತಿಕ್ರಿಯಿಸದಿದ್ದರೆ ನಾವು ವಿಷಯವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮುಂದೆ ಇಡುತ್ತೇವೆ” ಎಂದು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಟ್ರೋಫಿ ಈಗ ದುಬೈನ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಕಚೇರಿಯಲ್ಲಿದೆ. ನಖ್ವಿ ತಮ್ಮ ಅನುಮತಿಯಿಲ್ಲದೆ ಯಾರಿಗೂ ಟ್ರೋಫಿ ಹಸ್ತಾಂತರಿಸಬಾರದು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.