July 21, 2026
Tuesday, July 21, 2026
spot_img

ಭಾರತದಿಂದ ಪಾಕಿಸ್ತಾನದ ವಿರುದ್ಧ ಮತ್ತೊಮ್ಮೆ ಕಠಿಣ ನಿಲುವು: ಗಡಿಯಲ್ಲಿ ದೀಪಾವಳಿ ಸಿಹಿ ವಿತರಣೆಗೆ ಬ್ರೇಕ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರತಿ ವರ್ಷ ದೀಪಾವಳಿ ಮುಂತಾದ ವಿಶೇಷ ಸಂದರ್ಭಗಳಲ್ಲಿ ಭಾರತೀಯ ಸೈನಿಕರು ಮತ್ತು ಪಾಕಿಸ್ತಾನದ ಯೋಧರು ಸಿಹಿತಿಂಡಿ ವಿನಿಮಯ ಮಾಡಿಕೊಳ್ಳುವುದು ವಾಡಿಕೆ. ಆದರೆ ಈ ಬಾರಿ ಉದ್ವಿಗ್ನ ವಾತಾವರಣ ಇನ್ನೂ ಮುಂದಿವರಿದಿರುವುದರಿಂದ ಸಿಹಿತಿಂಡಿ ವಿತರಣೆಗೆ ಕೇಂದ್ರ ಸರ್ಕಾರ ಬ್ರೇಕ್‌ ಹಾಕಿದೆ.

ಸ್ವಾತಂತ್ರ್ಯ ದಿನಾಚರಣೆಯ ನಂತರ ಭಾರತ ಮತ್ತೊಮ್ಮೆ ದೀಪಾವಳಿಯಂದು ಪಾಕಿಸ್ತಾನಿ ರೇಂಜರ್‌ಗಳಿಗೆ ಸಿಹಿ ನೀಡುವುದನ್ನು ನಿಲ್ಲಿಸಿದೆ. ಈ ವರ್ಷ ಭಾರತ-ಪಾಕ್ ಗಡಿಯಲ್ಲಿ ಸಾಂಪ್ರದಾಯಿಕ ಸಿಹಿತಿಂಡಿಗಳ ವಿನಿಮಯ ನಡೆಸದಂತೆ ಕೇಂದ್ರ ಗೃಹ ಸಚಿವಾಲಯ ಗಡಿ ಭದ್ರತಾ ಪಡೆ (BSF)ಗೆ ನಿರ್ದೇಶನ ನೀಡಿದೆ.

ಅದರಂತೆ ಬಿಎಸ್‌ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿರುವ ರಾಜಸ್ಥಾನದ ಶ್ರೀಗಂಗಾನಗರ, ಬಿಕಾನೇರ್, ಜೈಸಲ್ಮೇರ್ ಮತ್ತು ಬಾರ್ಮರ್‌ನಾದ್ಯಂತದ ಯಾವುದೇ ಸಿಹಿತಿಂಡಿ ವಿನಿಮಯ ನಡೆಯಲಿಲ್ಲ.

ದಶಕಗಳಿಂದ ಭಾರತ ಮತ್ತು ಪಾಕಿಸ್ತಾನಿ ಸೈನಿಕರು ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಹೋಳಿ, ದೀಪಾವಳಿ ಮತ್ತು ಈದ್‌ನಂತಹ ರಾಷ್ಟ್ರೀಯ ಮತ್ತು ಧಾರ್ಮಿಕ ಹಬ್ಬಗಳ ಸಂದರ್ಭಗಳಲ್ಲಿ ಸಿಹಿತಿಂಡಿ ಮತ್ತು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನದ ಭಯೋತ್ಪಾದಕರು 26 ಪ್ರವಾಸಿಗರನ್ನು ಕೊಲೆ ಮಾಡಿದ ನಂತರ ಈ ಸಂಪ್ರದಾಯವನ್ನು ನಿಲ್ಲಿಸಲಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಶತ್ರು ರಾಷ್ಟ್ರದೊಂದಿಗೆ ತಳೆದ ಕಠಿಣ ನಿಲುವನ್ನು ಮತ್ತೊಮ್ಮೆ ಎತ್ತಿ ಹಿಡಿದಿದೆ.

ಮೊದಲು ಆಗಸ್ಟ್ 15ರ ಸಿಹಿತಿಂಡಿಗಳ ವಿನಿಮಯವನ್ನು ಸ್ಥಗಿತಗೊಳಿಸಲಾಗಿತ್ತು ಮತ್ತು ಈಗ ಈ ನಿಲುವನ್ನು ದೀಪಾವಳಿಯವರೆಗೆ ವಿಸ್ತರಿಸಲಾಗಿದೆ. ಈ ಮೂಲಕ ನವದೆಹಲಿಯಿಂದ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಲಾಗಿದೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಡಿಯಾಚೆಗಿನ ಭಯೋತ್ಪಾದನೆ ಮುಂದುವರಿಯುವವರೆಗೆ ಇಂತಹ ಸೌಹಾರ್ದ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

‘ಆಗಸ್ಟ್ 15ರ ನಂತರ ಹೆಚ್ಚುತ್ತಿರುವ ಗಡಿಯಾಚೆಗಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಭಾರತ ಸಿಹಿತಿಂಡಿ ವಿತರಣೆನ್ನು ಸ್ಥಗಿತಗೊಳಿಸುವ ನಿಲುವಿಗೆ ಬದ್ಧವಾಗಿದೆʼ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !