ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಗಾರದ ಸಣ್ಣ ತುಂಡು ಕಳೆದುಹೋದ್ರೂ ಅದು ಮತ್ತೆ ಸಿಗೋ ಮಾತೇ ಇಲ್ಲ. ನೆಂಟರ ಮನೆಗಳಲ್ಲಿ ಕಳೆದುಹೋದ ವಸ್ತುಗಳೇ ಸಿಗೋದಿಲ್ಲ. ಇನ್ನು ಲಕ್ಷಾಂತರ ಜನರು ನಿತ್ಯವೂ ಬಂದು ಹೋಗುತ್ತಿರುವ ಹಾಸನಾಂಬ ಸನ್ನಿಧಿಯಲ್ಲಿ ಸಿಗೋಕೆ ಸಾಧ್ಯವಾ?
ಖಂಡಿತ ಹೌದು! ಒಳ್ಳೆಯ ಜನರು ಎಲ್ಲೆಲ್ಲಿ ಇದ್ದಾರೋ ಅಲ್ಲಿ ಕಳೆದುಹೋದ ವಸ್ತುಗಳು ಮತ್ತೆ ಸಿಕ್ಕೇ ಸಿಗುತ್ತವೆ. ಹಾಸನಾಂಬೆ ಸನ್ನಿಧಿಯಲ್ಲಿ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಮಹಿಳೆಯೊಬ್ಬಳು ಕಳೆದುಕೊಂಡಿದ್ದಾಳೆ. ಆದರೆ ಮಹಿಳೆಯ ಸರ ವಾಪಾಸ್ ಸಿಕ್ಕಿದೆ. ಭಕ್ತರೇ ಅದನ್ನು ಆಕೆಗೆ ಮರಳಿಸಿದ್ದಾರೆ.
ಮೈಸೂರಿನಿಂದ ಹಾಸನಾಂಬೆ ದರುಶನಕ್ಕೆ ಆಗಮಿಸಿದ್ದ ಮಹಿಳೆಯೊಬ್ಬರು ತಮ್ಮ ಚಿನ್ನದ ಸರವನ್ನು ಕಳೆದುಕೊಂಡಿದ್ದರು. ಈ ಸರವನ್ನು ದೇವಾಲಯದ ಆವರಣದಲ್ಲಿದ್ದ ಮತ್ತೊಬ್ಬ ಭಕ್ತ ಪತ್ತೆ ಮಾಡಿದ್ದು, ತಕ್ಷಣವೇ ಅದನ್ನು ದೇವಾಲಯದ ಆಡಳಿತ ಮಂಡಳಿಗೆ ತಲುಪಿಸಿದರು.
ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಈ ಚಿನ್ನದ ಸರವನ್ನು, ಭಕ್ತರು ಸ್ಕೌಟ್ಸ್ ಮತ್ತು ಗೈಡ್ಸ್ ಸೇವಾ ಕಾರ್ಯಕರ್ತರ ಮೂಲಕ ದೇವಾಲಯದ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಬಳಿಕ, ಸರ ಕಳೆದುಕೊಂಡಿದ್ದ ಮೈಸೂರಿನ ಮಹಿಳೆಯನ್ನು ಸಂಪರ್ಕಿಸಿ, ಗುರುತಿನ ಚೀಟಿ ಪರಿಶೀಲಿಸಿ ಅವರಿಗೆ ಮರಳಿಸಲಾಯಿತು.
ತಮ್ಮ ಚಿನ್ನದ ಸರ ಮರಳಿ ಸಿಕ್ಕಿದ್ದಕ್ಕೆ ಮಹಿಳೆ ಸಂತಸ ವ್ಯಕ್ತಪಡಿಸಿದರು. ಭಕ್ತರ ಈ ಅಪೂರ್ವ ಪ್ರಾಮಾಣಿಕತೆಗೆ ದೇವಾಲಯದ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಘಟನೆ ದರ್ಶನೋತ್ಸವದ ಪಾವಿತ್ರ್ಯತೆ ಮತ್ತು ಭಕ್ತರ ಸದ್ಗುಣಕ್ಕೆ ಸಾಕ್ಷಿಯಾಗಿದೆ.