Thursday, October 23, 2025

ಲಕ್ಷಾಂತರ ಭಕ್ತರ ನಡುವೆ ಹಾಸನಾಂಬೆಯ ದರುಶನ ಪಡೆದ ನಟ ಧ್ರುವ ಸರ್ಜಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಿಯ ಸನ್ನಿಧಿಗೆ ಇಂದು ಭಕ್ತಸಾಗರವೇ ಹರಿದು ಬಂದಿದೆ. ಸಾರ್ವಜನಿಕ ದರ್ಶನಕ್ಕೆ ಇದು ಹದಿಮೂರನೇ ಹಾಗೂ ಕಡೆಯ ದಿನವಾಗಿದ್ದು, ಹಿಂದೆಂದೂ ಕಾಣದಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಇವರ ನಡುವೆಯೇ ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ಅವರು ದೇವಿಯ ದರ್ಶನ ಪಡೆದರು.

ಸರತಿ ಸಾಲಲ್ಲಿ ನಿಂತ ಆಕ್ಷನ್ ಪ್ರಿನ್ಸ್: ಗೋಲ್ಡನ್ ಪಾಸ್ ಪಡೆದಿದ್ದರೂ ನಟ ಧ್ರುವ ಸರ್ಜಾ ಅವರು ತಮ್ಮ ತಂದೆ ಹಾಗೂ ಸ್ನೇಹಿತರೊಂದಿಗೆ ಸಾಮಾನ್ಯ ಭಕ್ತರಂತೆ ಸರತಿ ಸಾಲಿನಲ್ಲಿ ನಿಂತು ದೇವಾಲಯಕ್ಕೆ ಆಗಮಿಸಿದರು. ದೇವಸ್ಥಾನದ ಮುಖ್ಯದ್ವಾರದ ಸಮೀಪ ಬರುತ್ತಿದ್ದಂತೆ ಸರತಿ ಸಾಲಿನಿಂದ ಹೊರಬಂದು, ಮುಖ್ಯದ್ವಾರದ ಮೂಲಕ ಪ್ರವೇಶಿಸಿ ಅವರು ದೇವಿಯ ದರ್ಶನ ಪಡೆದರು.

ಭಕ್ತಸಾಗರ: ಬೆಳಿಗ್ಗೆ 6 ಗಂಟೆಯಿಂದಲೇ ಆರಂಭಗೊಂಡ ದೇವಿ ದರ್ಶನಕ್ಕೆ ಸಹಸ್ರಾರು ಭಕ್ತರು ಸಾಲುಗಟ್ಟಿ ನಿಂತಿದ್ದಾರೆ. ಧರ್ಮ ದರ್ಶನ, ₹1000, ₹300 ಹಾಗೂ ವಿಶೇಷ ದರ್ಶನದ ಸರತಿ ಸಾಲುಗಳೆಲ್ಲವೂ ಜನಜಂಗುಳಿಯಿಂದ ತುಂಬಿಹೋಗಿವೆ. ಇಂದು ರಾತ್ರಿ 7 ಗಂಟೆಯವರೆಗೆ ಭಕ್ತರಿಗೆ ನಿರಂತರವಾಗಿ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ರಾತ್ರಿ 7ಕ್ಕೆ ಬಾಗಿಲು ಬಂದ್: ಇಂದು ರಾತ್ರಿ 7 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಗರ್ಭಗುಡಿಯ ಬದಲಿಗೆ ಹಾಕಲಾಗುತ್ತದೆ. ಈ ಅವಧಿಯಲ್ಲಿ ದೇವಿಯ ದರ್ಶನ ಇರುವುದಿಲ್ಲ. ನಂತರ ಮಧ್ಯರಾತ್ರಿ 12 ಗಂಟೆಯಿಂದ ನಾಳೆ ಬೆಳಿಗ್ಗೆ 5 ಗಂಟೆಯವರೆಗೆ ಸ್ಥಳೀಯರಿಗೆ ಮತ್ತು ಸಾರ್ವಜನಿಕರಿಗೆ ಮತ್ತೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ನಾಳೆ (ಗುರುವಾರ) ಶಾಸ್ತ್ರೋಕ್ತವಾಗಿ ಹಾಸನಾಂಬೆ ದೇವಿ ಗರ್ಭಗುಡಿಯ ಬಾಗಿಲು ಮುಚ್ಚುವುದರೊಂದಿಗೆ ವರ್ಷದ ದರ್ಶನಕ್ಕೆ ತೆರೆ ಬೀಳಲಿದೆ.

error: Content is protected !!