Tuesday, October 28, 2025

ಅಸ್ಸಾಂನಲ್ಲಿ ರೈಲ್ವೆ ಹಳಿಯಲ್ಲಿ ಐಇಡಿ ಸ್ಫೋಟ: ತಪ್ಪಿದ ದೊಡ್ಡ ಅನಾಹುತ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಸ್ಸಾಂನ ಕೊಕ್ರಜಾರ್​​ ಜಿಲ್ಲೆಯಲ್ಲಿ ರೈಲ್ವೆ ಹಳಿಯಲ್ಲಿ ಐಇಡಿ ಸ್ಫೋಟ (IED Blast) ಸಂಭವಿಸಿದೆ. ಇದರಿಂದ ಮೂರು ಅಡಿ ಉದ್ದದ ಹಳಿಗೆ ಹಾನಿಯಾಗಿದ್ದು, ರೈಲು ಸೇವೆಗಳು ಕೆಲಕಾಲ ಸ್ಥಗಿತಗೊಂಡವು.

ಸದ್ಯ ಹಳಿಯನ್ನು ದುರಸ್ತಿಗೊಳಿಸಲಾಗಿದ್ದು, ರೈಲು ಸಂಚಾರ ಸಾಮಾನ್ಯ ಸ್ಥಿತಿಗೆ ಬಂದಿದೆ.

ಕೊಕ್ರಜಾರ್ ರೈಲು ನಿಲ್ದಾಣದಿಂದ ಸುಮಾರು ಐದು ಕಿ.ಮೀ. ದೂರದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಾವುದೇ ಸಾವು-ನೋವು ಸಂಭವಿಸಿಲ್ಲ ಮತ್ತು ರೈಲು ಹಳಿತಪ್ಪಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟ ಸಂಭವಿಸಿದ ಕೂಡಲೇ ಭದ್ರತಾ ಸಿಬ್ಬಂದಿ ಮತ್ತು ರೈಲ್ವೆ ಎಂಜಿನಿಯರ್‌ಗಳು ಸ್ಥಳಕ್ಕೆ ಧಾವಿಸಿ ಮುನ್ನೆಚ್ಚರಿಕೆ ಕ್ರಮವಾಗಿ ದುರಸ್ತಿ ಕಾರ್ಯ ಮತ್ತು ಪರಿಶೀಲನೆಗಾಗಿ ರೈಲು ಸೇವೆಗಳನ್ನು ಸ್ಥಗಿತಗೊಳಿಸಿದರು. ಇದರಿಂದ ಭಾರಿ ಅನಾಹುತ ತಪ್ಪಿದೆ.

‘ಗುರುವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಯುಪಿ ಅಜರಾ ಶುಗರ್ ಗೂಡ್ಸ್‌ ರೈಲು ಸಲಕತಿ ಮತ್ತು ಕೊಕ್ರಝಾರ್ ನಡುವೆ ಹಾದುಹೋಗುತ್ತಿದ್ದಾಗ ಸಮಸ್ಯೆ ಕಂಡುಬಂತು. ಕೂಡಲೇ ರೈಲನ್ನು ನಿಲ್ಲಿಸಿ ಪರಿಶೀಲಿಸಿದಾಗ ಶಂಕಿತ ಬಾಂಬ್ ಸ್ಫೋಟದಿಂದಾಗಿ ಹಳಿಗೆ ಹಾನಿಯಾಗಿರುವುದು ಗೊತ್ತಾಯಿತು’ ಎಂದು ಈಶಾನ್ಯ ಗಡಿನಾಡು ರೈಲ್ವೆ (NFR) ತಿಳಿಸಿದೆ.

ಸದ್ಯ ಈ ಮಾರ್ಗದಲ್ಲಿ ರೈಲು ಸಂಚಾರ ಯಥಾಸ್ಥಿತಿಯಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಕ್ರಝಾರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪುಷ್ಪರಾಜ್ ಸಿಂಗ್ ಮಾತನಾಡಿ, ‘ಹಳಿಯ ಒಂದು ಸಣ್ಣ ಭಾಗಕ್ಕೆ ಮಾತ್ರ ಹಾನಿಯಾಗಿದ್ದು, ಅದನ್ನು ತಕ್ಷಣವೇ ದುರಸ್ತಿ ಮಾಡಲಾಗಿದೆ. ರೈಲು ಸೇವೆ ಈಗ ಪುನರಾರಂಭಗೊಂಡಿದೆ. ರೈಲ್ವೆ ಮತ್ತು ಭದ್ರತಾ ಅಧಿಕಾರಿಗಳು ಸ್ಫೋಟ ನಡೆದ ಪ್ರದೇಶವನ್ನು ಸಂಪೂರ್ಣವಾಗಿ ಪರಿಶೀಲಿಸಿ ರೈಲು ಸೇವೆಯನ್ನು ಪುನಃಸ್ಥಾಪಿಸಿದ್ದಾರೆ. ಘಟನೆ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ’ ಎಂದಿದ್ದಾರೆ. ಸ್ಫೋಟದ ಹಿಂದೆ ನಕ್ಸಲರ ಕೈವಾಡವಿದೆಯೇ ಅಥವಾ ಸ್ಥಳೀಯರ ಕೃತ್ಯವೇ ಎನ್ನುವುದು ತನಿಖೆ ಬಳಿಕ ಗೊತ್ತಾಗಲಿದೆ.

error: Content is protected !!