ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಸಂಭ್ರಮ ನಡುವೆ ಎಲ್ಲಿ ನೋಡಿದರೂ ದೀಪಗಳು, ಪಟಾಕಿಗಳದ್ದೇ ಸದ್ದು. ವರ್ಷದಿಂದ ವರ್ಷಕ್ಕೆ ಹೊಸ ಹೊಸ ಚಕ್ರಿ, ರಾಕೆಟ್, ಬಾಂಬ್ ಮುಂತಾದುವುಗಳು ಬರುತ್ತಲೇ ಇರುತ್ತವೆ. ಈ ವರ್ಷದ ಕ್ರೇಜ್ ಆಗಿರುವ ಕಾರ್ಬೈಟ್ ಗನ್ (ದೇಸಿ ಪಾಟಕಿ ಗನ್) ಹಲವು ಮಕ್ಕಳ ಬಾಳನ್ನು ಅಂಧಕಾರದಲ್ಲಿ ಮುಳುಗಿಸಿದೆ.
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ವ್ಯಾಪಕ ವೈರಲ್ ಆಗುತ್ತಿರುವ ಕ್ಯಾಲ್ಸಿಯಂ ಕಾರ್ಬೈಡ್ ಗನ್ ಗಳನ್ನು ಬಳಕೆ ಮಾಡಿದ್ದರಿಂದ ಮಧ್ಯ ಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ 60ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ. ಈ ಪೈಕಿ ಕನಿಷ್ಛ 14 ಮಕ್ಕಳು ಕಣ್ಣುಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಗಾಯಾಳು ಮಕ್ಕಳನ್ನು ಭೋಪಾಲ್ ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅವರಲ್ಲಿ ಹೆಚ್ಚಿನವರು 8 ರಿಂದ 14 ವರ್ಷ ವಯಸ್ಸಿನ ಮಕ್ಕಳು .
ದೀಪಾವಳಿಯ ಒಂದು ದಿನದ ನಂತರ ಭೋಪಾಲ್‌ನಾದ್ಯಂತ 150 ಕ್ಕೂ ಹೆಚ್ಚು ಕಾರ್ಬೈಡ್ ಗನ್ ಗಾಯಗಳ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.ಅನೇಕ ಸಂತ್ರಸ್ಥ ಮಕ್ಕಳನ್ನು ಪ್ರಥಮ ಚಿಕಿತ್ಸೆಯ ನಂತರ ಬಿಡುಗಡೆ ಮಾಡಲಾಗಿದ್ದರೂ, ಹಲವಾರು ಮಕ್ಕಳು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಹಿಂದೆ ತೋಟಗಳಲ್ಲಿನ ಕೋತಿಗಳನ್ನು ಓಡಿಸಲು ಈ ಕಾರ್ಬೈಡ್ ಪೈಪ್ ಗನ್ ಗಳನ್ನು ಬಳಕೆ ಮಾಡಲಾಗುತ್ತಿತ್ತು. ಇದೀಗ ಇವುಗಳ ಮಾರಾಟ ಹೆಚ್ಚಾದಂತೆ ದೀಪಾವಳಿ ಸಂದರ್ಭದಲ್ಲಿ ಮಕ್ಕಳು ಯಥೇಚ್ಚವಾಗಿ ಖರೀದಿಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಂಎಚ್‌ಒ) ಡಾ. ಮನೀಶ್ ಶರ್ಮಾ ಅವರು, ‘ತಾತ್ಕಾಲಿಕ “ಕಾರ್ಬೈಡ್ ಪೈಪ್ ಬಂದೂಕುಗಳು” ಅತ್ಯಂತ ಅಪಾಯಕಾರಿ’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಈ ಬಂದೂಕುಗಳಿಂದ ಗಾಯಗೊಂಡ ಸುಮಾರು 60 ಜನರು ಪ್ರಸ್ತುತ ನಗರದಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಜೀವಕ್ಕೆ ಯಾವುದೇ ಅಪಾಯ ಇಲ್ಲದಿದ್ದರೂ, ಕೆಲವು ಗಾಯಗೊಂಡ ವ್ಯಕ್ತಿಗಳು ದೃಷ್ಟಿ ಕಳೆದುಕೊಂಡಿದ್ದಾರೆ, ಆದರೆ ಕೆಲವರು ಮುಖದಲ್ಲಿ ಸುಟ್ಟ ಗಾಯಗಳನ್ನು ಅನುಭವಿಸಿದ್ದಾರೆ’ ಎಂದು ಅವರು ಹೇಳಿದರು.
ಈ ವಿಶೇಷ ಗನ್ ಗಳನ್ನು ಪ್ಲಾಸ್ಟಿಕ್ ಪೈಪ್, ಗ್ಯಾಸ್ ಲೈಟರ್ ಮತ್ತು ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಒರಟಾಗಿ ಜೋಡಿಸಲಾಗುತ್ತದೆ. ನೀರು ಕ್ಯಾಲ್ಸಿಯಂ ಕಾರ್ಬೈಡ್‌ನೊಂದಿಗೆ ಸಂಪರ್ಕಕ್ಕೆ ಬಂದಾಗ, ಅದು ಅಸಿಟಲೀನ್ ಅನಿಲವನ್ನು ಉತ್ಪಾದಿಸುತ್ತದೆ. ಇದು ಬೆಂಕಿ ಹೊತ್ತಿಕೊಂಡಾಗ ಸ್ಫೋಟಗೊಳ್ಳುತ್ತದೆ.ಪರಿಣಾಮವಾಗಿ ಉಂಟಾಗುವ ಸ್ಫೋಟವು ಪ್ಲಾಸ್ಟಿಕ್ ಪೈಪ್‌ನ ತುಣುಕುಗಳನ್ನು ಹೆಚ್ಚಿನ ವೇಗದಲ್ಲಿ ಚಲಿಸುವಂತೆ ಮಾಡುತ್ತದೆ. ಈ ವೇಳೆ ಅದನ್ನು ಬಳಸುವವರಿಗೂ ಗಾಯಳಾಗುವ ಸಂಭವವಿರುತ್ತದೆ. ಪ್ರಮುಖವಾಗಿ ಮಕ್ಕಳು ಈ ಗನ್ ಗಳನ್ನು ಅವೈಜ್ಞಾನಿಕವಾಗಿ ಬಳಕೆ ಮಾಡುವುದರಿಂದ ಅವರ ಕಣ್ಣುಗಳು, ಮುಖ ಮತ್ತು ಚರ್ಮಕ್ಕೆ ಶ್ರಾಪ್ನಲ್ ತರಹದ ಗಾಯಗಳನ್ನು ಉಂಟುಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

