ಹೊಸದಿಗಂತ ವರದಿ, ಕಾರವಾರ:
ಜಿಲ್ಲೆಯ ಕರಾವಳಿಯಲ್ಲಿ ಬಿರುಗಾಳಿ ಸಹಿತ ಮಳೆಯಾಗಿದ್ದು , ಗಾಳಿಯಿಂದಾಗಿ ಹಲವಾರು ಕಡೆಗಳಲ್ಲಿ ಮರಗಳು ಮುರಿದು ಬಿದ್ದಿವೆ.
ತಾಲೂಕಿನ ಬಿಣಗಾದಲ್ಲಿ ಕದಂಬ ನೌಕಾನೆಲೆ ಗೇಟಿನ ಎದುರು ಬೃಹತ್ ಗಾತ್ರದ ಮಾವಿನ ಮರ ತುಂಡಾಗಿ ಬಿದ್ದ ಪರಿಣಾಮ ಮರದ ಕೆಳಗೆ ಮೇಯುತ್ತಿದ್ದ ಹಸುವೊಂದು ಮೃತ ಪಟ್ಟಿದ್ದು ಮತ್ತೊಂದು ಆಕಳಿಗೆ ತೀವ್ರ ಗಾಯಗಳಾಗಿವೆ. ಮರ ಬಿದ್ದ ಪರಿಸರದಲ್ಲಿ ನಿಲ್ಲಿಸಿಟ್ಟ ಸುಮಾರು 10 ಕ್ಕೂ ಹೆಚ್ಟು ಬೈಕ್ ಗಳು ಜಖಂಗೊಂಡಿವೆ.
ಅಗ್ನಿಶಾಮಕ ದಳ ಮತ್ತು ನೌಕಾನೆಲೆ ಸಿಬ್ಬಂದಿಗಳು ಬಿದ್ದ ಮರವನ್ನು ತೆರವುಗೊಳಿಸುವ ಕಾರ್ಯ ನಡೆಸಿದ್ದಾರೆ.
ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕುಗಳಲ್ಲಿ ಬಿರುಗಾಳಿ ಸಹಿತ ಮಳೆ ಸುರಿದಿದ್ದು ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿದೆ.
ಅಪಾಯದ ಮುನ್ಸೂಚನೆ ನೀಡಿರುವುದರಿಂದ ಮೀನುಗಾರರು ನೀರಿಗಿಳಿಯಲಿಲ್ಲ.
ಹಲವಾರು ಕಡೆಗಳಲ್ಲಿ ಕೊಯ್ಲಿಗೆ ಬಂದ ಭತ್ತದ ಬೆಳೆ ಮಳೆಯಿಂದಾಗಿ ನೆಲಕ್ಕೊರಗಿದ್ದು ಇನ್ನೂ ಕೆಲವು ದಿನ ಮಳೆ ಮುಂದುವರಿದರೆ ಬೆಳೆ ಹಾನಿಯ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

