Wednesday, October 29, 2025

ಸುಪ್ರೀಂ ಪೀಠದ ಚುಕ್ಕಾಣಿ ಬದಲಾವಣೆ: ಹಿರಿಯ ನ್ಯಾ. ಸೂರ್ಯಕಾಂತ್ ಕಡೆಗೆ ಎಲ್ಲರ ಚಿತ್ತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (CJI) ಬಿ.ಆರ್. ಗವಾಯಿ ಅವರು ನವೆಂಬರ್ 23 ರಂದು ನಿವೃತ್ತಿ ಹೊಂದಲಿರುವ ಹಿನ್ನೆಲೆಯಲ್ಲಿ, ಮುಂದಿನ ಮುಖ್ಯ ನ್ಯಾಯಮೂರ್ತಿ ಆಯ್ಕೆ ಪ್ರಕ್ರಿಯೆಗೆ ಇದೀಗ ಕೇಂದ್ರ ಸರ್ಕಾರ ಚಾಲನೆ ನೀಡಿದೆ.

ಸಾಂಪ್ರದಾಯಿಕ ಕಾರ್ಯವಿಧಾನದಂತೆ, ಕೇಂದ್ರ ಕಾನೂನು ಸಚಿವಾಲಯವು ಹಾಲಿ ಸಿಜೆಐ ಬಿ.ಆರ್. ಗವಾಯಿ ಅವರಿಗೆ ಪತ್ರ ಬರೆದಿದ್ದು, ತಮ್ಮ ಉತ್ತರಾಧಿಕಾರಿಯನ್ನು ನಾಮನಿರ್ದೇಶನ ಮಾಡುವಂತೆ ಕೋರಿದೆ. ಹಾಲಿ ಸಿಜೆಐ ನಿವೃತ್ತಿಯಾಗುವುದಕ್ಕೆ ಸುಮಾರು ಒಂದು ತಿಂಗಳ ಮೊದಲು ಈ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ.

ಸದ್ಯ ಸುಪ್ರೀಂ ಕೋರ್ಟ್‌ನ ಹಿರಿತನದ ಆಧಾರದ ಮೇಲೆ, ಹಿರಿಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ನವೆಂಬರ್ 23 ರಂದು ನ್ಯಾಯಮೂರ್ತಿ ಗವಾಯಿ ಅವರ ನಿವೃತ್ತಿಯ ಬಳಿಕ ಅವರು ಈ ಉನ್ನತ ಹುದ್ದೆಯನ್ನು ಅಲಂಕರಿಸುವ ನಿರೀಕ್ಷೆಯಿದೆ.

ಪ್ರಸ್ತುತ ನ್ಯಾಯಮೂರ್ತಿ ಗವಾಯಿ ಅವರು ಭೂತಾನ್‌ಗೆ ನಾಲ್ಕು ದಿನಗಳ ಅಧಿಕೃತ ಭೇಟಿಯಲ್ಲಿದ್ದಾರೆ. ಅವರು ನವದೆಹಲಿಗೆ ಹಿಂದಿರುಗಿದ ಕೂಡಲೇ ಕೇಂದ್ರ ಸರ್ಕಾರದ ಕೋರಿಕೆಗೆ ಸಂಬಂಧಿಸಿದಂತೆ ತಮ್ಮ ಉತ್ತರಾಧಿಕಾರಿಯ ಹೆಸರನ್ನು ಶಿಫಾರಸು ಮಾಡಿ ಕಳುಹಿಸುವ ಸಾಧ್ಯತೆ ಇದೆ. ಈ ಶಿಫಾರಸಿನೊಂದಿಗೆ, ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ ನೇಮಕಾತಿ ಕಾರ್ಯವಿಧಾನವು ಹೊಸ ವೇಗ ಪಡೆಯಲಿದೆ.

error: Content is protected !!