ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣದಲ್ಲಿ ಕರ್ನಾಟಕದ ಬೆಂಗಳೂರು ಮತ್ತು ಬಳ್ಳಾರಿಯ ಮಹತ್ವದ ಲಿಂಕ್‌ಗಳು ಬಯಲಾಗಿದೆ. ಪ್ರಕರಣದ ಪ್ರಮುಖ ಆರೋಪಿ, ಬೆಂಗಳೂರು ಮೂಲದ ಉನ್ನಿಕೃಷ್ಣನ್ ಪೊಟ್ಟಿಯನ್ನು ವಿಶೇಷ ತನಿಖಾ ತಂಡ ಸಾಕ್ಷ್ಯ ಸಂಗ್ರಹಕ್ಕಾಗಿ ಬೆಂಗಳೂರಿಗೆ ಕರೆತಂದಿದೆ.
ದೇಣಿಗೆ ಸಂಗ್ರಹಕ್ಕೆ ಚಿನ್ನಲೇಪಿತ ಕವಚ ಬಳಕೆ ಆರೋಪ
ಪೊಟ್ಟಿ ವಿರುದ್ಧ ಬೆಂಗಳೂರಿನ ಶ್ರೀರಾಂಪುರದಲ್ಲಿ ಚಿನ್ನಲೇಪಿತ ಕವಚಗಳನ್ನು ಪ್ರದರ್ಶಿಸಿ ದೇಣಿಗೆ ಸಂಗ್ರಹಿಸಿದ್ದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ, ಎಸ್‌ಪಿ ಶಶಿಧರನ್ ನೇತೃತ್ವದ ಕೇರಳದ ಎಸ್‌ಐಟಿ ಅಧಿಕಾರಿಗಳು ಬೆಂಗಳೂರಿನಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.
ಬಳ್ಳಾರಿಯಲ್ಲಿ ಕದ್ದ ಚಿನ್ನ ಮಾರಾಟ, ವಶಕ್ಕೆ
ಪೊಟ್ಟಿ ಕದ್ದ ಚಿನ್ನವನ್ನು ಬಳ್ಳಾರಿಯಲ್ಲಿ ಮಾರಾಟ ಮಾಡಿದ್ದ ಆರೋಪದ ಮೇಲೆ ಅಲ್ಲಿಯೂ ತನಿಖೆ ನಡೆಸಲಾಗಿದೆ. ಎಸ್‌ಐಟಿ ತಂಡ ನಿನ್ನೆ ಬಳ್ಳಾರಿಯ ರೊದ್ದಂ ಜ್ಯುವೆಲ್ಸ್ ಮಳಿಗೆ ಮೇಲೆ ದಾಳಿ ನಡೆಸಿ, ನಾಣ್ಯಗಳ ರೂಪದಲ್ಲಿ ಪರಿವರ್ತಿಸಲಾಗಿದ್ದ 476 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದೆ. ಈ ಚಿನ್ನವನ್ನು ಪೊಟ್ಟಿಯಿಂದ ಜ್ಯುವೆಲ್ಸ್ ಮಾಲೀಕ ಗೋವರ್ಧನ್ ಖರೀದಿಸಿದ್ದು, ಆತನ ವಿಚಾರಣೆ ನಡೆಸಲಾಗಿದೆ. ಸದ್ಯ ರೊದ್ದಂ ಗೋಲ್ಡ್ ಶಾಪ್‌ಗೆ ಬೀಗ ಜಡಿಯಲಾಗಿದೆ.
ಬೆಂಗಳೂರಿನ ಮನೆಯಲ್ಲಿ ಚಿನ್ನದ ಗಟ್ಟಿ, ನಗದು ಪತ್ತೆ
ಬಳ್ಳಾರಿಯಲ್ಲಿ ವಶಪಡಿಸಿಕೊಂಡ ಚಿನ್ನಕ್ಕೆ ಸಂಬಂಧಿಸಿದ ದಾಖಲೆಗಳು ಬೆಂಗಳೂರಿನಲ್ಲಿದ್ದ ಕಾರಣ, ಅಧಿಕಾರಿಗಳು ಕೋರ್ಟ್ ಅನುಮತಿಯೊಂದಿಗೆ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿರುವ ಉನ್ನಿಕೃಷ್ಣನ್ ಪೊಟ್ಟಿಯ ಮನೆಯಲ್ಲಿ ಚಿನ್ನದ ಗಟ್ಟಿ ಮತ್ತು ₹2 ಲಕ್ಷ ನಗದು ಪತ್ತೆಯಾಗಿದೆ ಎಂದು ಎಸ್‌ಐಟಿ ಮೂಲಗಳು ಮಾಹಿತಿ ನೀಡಿವೆ.
ಏನಿದು ಪ್ರಕರಣ?
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ದ್ವಾರಪಾಲಕ ವಿಗ್ರಹಗಳಿಗೆ ಹೊದಿಸಿದ 42.8 ಕೆಜಿ ತೂಕದ ಕವಚದಲ್ಲಿ 4.5 ಕೆಜಿ ಚಿನ್ನ ನಾಪತ್ತೆಯಾಗಿದೆ ಎಂಬ ಆರೋಪವಿದೆ. 2019ರಲ್ಲಿ ಮೂರ್ತಿಗಳಿಗೆ ಪುನರ್‌ಲೇಪನ ಮಾಡಿದ ಸಂದರ್ಭದಲ್ಲಿ ಈ ಚಿನ್ನದ ಕಳ್ಳತನ ನಡೆದಿದೆ ಎಂದು ವಿಶೇಷ ಆಯುಕ್ತರು ಆರೋಪಿಸಿದ್ದರು. ಹಳೆಯ ತಾಮ್ರ ಮತ್ತು ಚಿನ್ನದ ಲೇಪನದ ಮೂರ್ತಿಗಳ ತೂಕದಲ್ಲಿ ವ್ಯತ್ಯಾಸ ಕಂಡುಬಂದಿರುವ ಬಗ್ಗೆ ದೂರು ದಾಖಲಾಗಿತ್ತು.

