ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಮಾದನಾಯಕನಹಳ್ಳಿ ಹುಸ್ಕೂರು ಎಪಿಎಂಸಿ ಬಳಿ ರಸ್ತೆಯ ದುರವಸ್ಥೆಯು ಮತ್ತೊಂದು ಜೀವವನ್ನು ಬಲಿ ತೆಗೆದುಕೊಂಡಿದೆ. ರಸ್ತೆ ಗುಂಡಿಯನ್ನು ತಪ್ಪಿಸಲು ಹೋಗಿ ಟೆಕ್ಕಿ ಯುವತಿ ಪ್ರಿಯಾಂಕ (26) ಲಾರಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ದಾರುಣ ಘಟನೆ ವರದಿಯಾಗಿದೆ.
ಮೃತ ಯುವತಿ ಪ್ರಿಯಾಂಕ ತಮ್ಮ ಅಣ್ಣನ ಜೊತೆ ಬೈಕ್‌ನಲ್ಲಿ ಎಪಿಎಂಸಿ ಹುಸ್ಕೂರು ರಸ್ತೆಯಿಂದ ಮಾದಾವರ ಕಡೆಗೆ ತೆರಳುತ್ತಿದ್ದರು. ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಯು ಸಂಪೂರ್ಣ ಹಾಳಾಗಿತ್ತು ಮತ್ತು ಗುಂಡಿಗಳಿಂದ ಕೂಡಿತ್ತು.
ಈ ವೇಳೆ ಗುಂಡಿಯನ್ನು ತಪ್ಪಿಸಲು ಯತ್ನಿಸಿದ ಪ್ರಿಯಾಂಕ ಅವರ ಸಹೋದರನ ನಿಯಂತ್ರಣ ತಪ್ಪಿ, ಯುವತಿ ಬೈಕ್‌ನಿಂದ ಕೆಳಗೆ ಬಿದ್ದಿದ್ದಾರೆ. ಅದೇ ಸಮಯಕ್ಕೆ ಹಿಂಬದಿಯಿಂದ ಬಂದ ಲಾರಿ ಯುವತಿಯ ತಲೆಯ ಮೇಲೆ ಹರಿದ ಪರಿಣಾಮ, ಪ್ರಿಯಾಂಕ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಈ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಸ್ತೆ ಗುಂಡಿಗಳು ಮತ್ತು ಕಳಪೆ ಕಾಮಗಾರಿಯಿಂದಾಗಿ ಅಮಾಯಕ ಜೀವಗಳು ಬಲಿಯಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

