April 14, 2026
Tuesday, April 14, 2026
spot_img

ವಿದೇಶಿ ಲಿಂಕ್ ಹೊಂದಿದ್ದ 6 ಮಂದಿ ಸೈಬರ್ ವಂಚಕರ ಹೆಡೆಮುರಿ ಕಟ್ಟಿದ ಮಂಗಳೂರು ಖಾಕಿ ಪಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿದೇಶಿ ಸೈಬರ್ ವಂಚಕರೊಂದಿಗೆ ಕೈಜೋಡಿಸಿ ದೇಶದಾದ್ಯಂತ ಜನರಿಗೆ ನಾಮ ಹಾಕುತ್ತಿದ್ದ ಬೃಹತ್ ಜಾಲವೊಂದನ್ನು ಮಂಗಳೂರು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಹೈದರಾಬಾದ್‌ನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶೇಖ್ ಕರೀಮುಲ್ಲಾ, ಬುಡಿದಿನ್ನೆ ವಂಶಿ, ಬಡೆ ಶ್ರೀನಿವಾಸ್, ಪಂಡಿತಿ ಕ್ರಾಂತಿ ಕುಮಾರ್, ಇಬ್ರಾಹಿಂ ಪ್ರಾಯ ಹಾಗೂ ಉತ್ಸಲ ಸಂತೋಷ್ ಕೃಷ್ಣ ಬಂಧಿತ ಆರೋಪಿಗಳು.

ಈ ತಂಡವು ಸೋಶಿಯಲ್ ಮೀಡಿಯಾದಲ್ಲಿ ಬ್ಯಾಂಕ್ ಖಾತೆದಾರರನ್ನು ಸೆಳೆಯಲು ಆಮಿಷವೊಡ್ಡುತ್ತಿತ್ತು. “ನಿಮ್ಮ ಬ್ಯಾಂಕ್ ಖಾತೆ ನೀಡಿದರೆ 4 ರಿಂದ 6% ಕಮಿಷನ್ ನೀಡಲಾಗುವುದು” ಎಂದು ಜಾಹಿರಾತು ನೀಡುತ್ತಿದ್ದರು. ಇದನ್ನು ನಂಬಿ ಬಂದವರಿಂದ ರಹಸ್ಯ ಓಟಿಪಿ (OTP) ಪಡೆದು ವಿದೇಶದಲ್ಲಿರುವ ತಮ್ಮ ಸಹಚರರಿಗೆ ರವಾನಿಸುತ್ತಿದ್ದರು. ಈ ಮಾಹಿತಿಯನ್ನು ಬಳಸಿಕೊಂಡು ವಿದೇಶಿ ಸೈಬರ್ ಖದೀಮರು ಸಾರ್ವಜನಿಕರ ಹಣವನ್ನು ಕ್ಷಣಾರ್ಧದಲ್ಲಿ ಲೂಟಿ ಮಾಡುತ್ತಿದ್ದರು. ಈ ತಂಡವು ಕೇವಲ ನಿನ್ನೆ ಒಂದೇ ದಿನ ಬರೋಬ್ಬರಿ 2 ಕೋಟಿ ರೂಪಾಯಿ ವಹಿವಾಟು ನಡೆಸಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮಂಗಳೂರಿನ ಮೊಹ್ಮದ್ ಇಕ್ಬಾಲ್ ಎಂಬುವವರು ನೀಡಿದ ದೂರಿನ ಮೇರೆಗೆ ಹದ್ದಿನ ಕಣ್ಣಿಟ್ಟ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ ವಂಚನೆಗೆ ಬಳಸುತ್ತಿದ್ದ ಈ ಕೆಳಗಿನ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ:

18 ಮೊಬೈಲ್ ಫೋನ್‌ಗಳು

12 ಸಿಮ್ ಕಾರ್ಡ್‌ಗಳು

1 ಲ್ಯಾಪ್‌ಟಾಪ್

15 ಚೆಕ್ ಬುಕ್‌ಗಳು

18 ಡೆಬಿಟ್ ಕಾರ್ಡ್‌ಗಳು

12 ಬ್ಯಾಂಕ್ ಪಾಸ್ ಬುಕ್‌ಗಳು

ಸೈಬರ್ ಲೋಕದ ಈ ಮಾಯಾವಿಗಳ ಹಿಂದೆ ಇನ್ನೂ ದೊಡ್ಡ ಜಾಲವಿರುವ ಶಂಕೆಯಿದ್ದು, ಮಂಗಳೂರು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !