October 15, 2026
Thursday, October 15, 2026
spot_img

ಕರ್ನೂಲ್‌ ಬಸ್‌ ಅವಘಡ: ವಾಹನದಲ್ಲಿದ್ದ 234 ಸ್ಮಾರ್ಟ್‌ ಫೋನ್‌ಗಳೇ ದುರಂತಕ್ಕೆ ಕಾರಣ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಂಧ್ರಪ್ರದೇಶದಲ್ಲಿ ಸಂಭವಿಸಿದ ಕರ್ನೂಲ್‌ ಅಗ್ನಿ ದುರಂತದ ಬಗ್ಗೆ ತನಿಖೆ ಮುಂದುವರೆದಿದ್ದು, ಹೊಸ ಅಂಶವೊಂದು ಬೆಳಕಿಗೆ ಬಂದಿದೆ.

ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ ಬರುತ್ತಿದ್ದ ಕಾವೇರಿ ಟ್ರಾವೆಲ್ಸ್‌ ಬಸ್‌ನಲ್ಲಿ 234 ಸ್ಮಾರ್ಟ್‌ಫೋನ್‌ಗಳ ಪಾರ್ಸಲ್‌ ಅನ್ನು ಸಾಗಿಸಲಾಗುತ್ತಿತ್ತು. ಈ ಫೋನ್‌ಗಳ ಬ್ಯಾಟರಿಗಳು ಸ್ಫೋಟಗೊಂಡಿದ್ದರಿಂದಲೇ ಬಸ್ಸಿನಲ್ಲಿ ಬೆಂಕಿಯ ಕೆನ್ನಾಲಿಗೆಯ ತೀವ್ರತೆ ಹೆಚ್ಚಾಯಿತು, ಇದರಿಂದ 20 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಬಸ್ಸಿನಲ್ಲಿದ್ದ 234 ಸ್ಮಾರ್ಟ್‌ಫೋನ್‌ಗಳ ಮೌಲ್ಯ 46 ಲಕ್ಷ ರೂ. ಆಗಿವೆ ಎಂದು ಅಂದಾಜಿಸಲಾಗಿದೆ. ಹೈದರಾಬಾದ್ ಮೂಲದ ಮಂಗನಾಥ್ ಎಂಬ ವ್ಯಾಪಾರಿ ಇದನ್ನು ಪಾರ್ಸಲ್ ಮೂಲಕ ಕಳುಹಿಸಿದ್ದರು. ಈ ಸರಕು ಬೆಂಗಳೂರಿನ ಇ-ಕಾಮರ್ಸ್ ಕಂಪನಿಗೆ ಸಾಗಿಸಲಾಗುತ್ತಿತ್ತು, ಅಲ್ಲಿಂದ ಫೋನ್‌ಗಳನ್ನು ಗ್ರಾಹಕರಿಗೆ ವಿತರಿಸಬೇಕಿತ್ತು. ಫೋನ್‌ಗಳು ಬೆಂಕಿ ಹೊತ್ತಿಕೊಂಡಾಗ ಅವುಗಳ ಬ್ಯಾಟರಿಗಳು ಸ್ಫೋಟಗೊಳ್ಳುವ ಶಬ್ದ ಕೇಳಿಸಿತು ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ.

ಸ್ಮಾರ್ಟ್‌ಫೋನ್‌ಗಳ ಸ್ಫೋಟದ ಜೊತೆಗೆ, ಬಸ್ಸಿನ ಹವಾನಿಯಂತ್ರಣ ವ್ಯವಸ್ಥೆಗೆ ಬಳಸಿದ್ದ ಎಲೆಕ್ಟ್ರಿಕಲ್ ಬ್ಯಾಟರಿಗಳು ಸಹ ಸ್ಫೋಟಗೊಂಡವು. ಬಸ್ಸಿನ ನೆಲದ ಮೇಲೆ ಹಾಸಿದ್ದ ಅಲ್ಯುಮಿನಿಯಂ ಶೀಟ್‌ಗಳು ಕರಗಿ ಹೋಗುವಷ್ಟು ಶಾಖ ಇತ್ತು. ಅಪಘಾತದ ಮೊದಲು, ಬಸ್ಸಿನ ಮುಂಭಾಗದಲ್ಲಿ ಇಂಧನ ಸೋರಿಕೆಯಿಂದಲೇ ಬೆಂಕಿ ಆರಂಭವಾಗಿದೆ ಎಂದು ನಂಬಲಾಗಿದೆ. ಬಸ್ ಅಡಿಗೆ ಒಂದು ಬೈಕ್ ಸಿಕ್ಕಿ ಹಾಕಿಕೊಂಡು, ಅದರ ಪೆಟ್ರೋಲ್ ಚೆಲ್ಲಿದ ಪರಿಣಾಮವಾಗಿ, ಉಷ್ಣ ಅಥವಾ ಕಿಡಿ ತಗುಲಿ ಬೆಂಕಿ ಹೊತ್ತಿಕೊಂಡಿತು. ಅದು ತಕ್ಷಣವೇ ಇಡೀ ವಾಹನವನ್ನು ಆವರಿಸಿತು.

Must Read